

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದ ಅಕ್ಷರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಿಬಿಎಸ್‌ಇ ಹತ್ತನೇ ತರಗತಿ ಫಲಿತಾಂಶದಲ್ಲಿ ಸತತ 10ನೇ ಬಾರಿಗೆ ಶೇ.100ರಷ್ಟು ಫಲಿತಾಂಶ ಪಡೆಯುವ ಮೂಲಕ ದಾಖಲೆ ಬರೆದಿದೆ.
ಪರೀಕ್ಷೆ ಬರೆದಿದ್ದ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಆರು ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು, 28 ವಿದ್ಯಾರ್ಥಿಗಳು ಶೇ.75ಕ್ಕಿಂತ ಹೆಚ್ಚು, 24 ವಿದ್ಯಾರ್ಥಿಗಳು ಶೇ.60 ರಿಂದ ಶೇ.70ರೊಳಗೆ ಹಾಗೂ ಶೇ.60ರೊಳಗೆ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಚ್.ಜಿ.ಗಗನ್(ಶೇ.96.6), ಟಿ.ಕೆ.ದುರ್ಗ ದರ್ಶನ್(ಶೇ.94.4), ಕೆ.ತ್ರಿಷಾ(ಶೇ.93.6), ಜಿ.ಬಿ.ನಿಸರ್ಗಾ(ಶೇ.92.2), ನಿಖಿಲಾ ಪಿ.ಭಟ್(ಶೇ.90), ಇ.ಆರ್.ನಿಖಿತಾ(ಶೇ.90), ಬಿ.ಎಸ್.ನಯನಾ(ಶೇ.90) ಹೆಚ್ಚು ಅಂಕ ಗಳಿಸಿದ್ದಾರೆ. ಉತ್ತಮ ಫಲತಾಂಶ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಅಭಿನಂದಿಸಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆನ್ನುವ ಉದ್ದೇಶದಿಂದ ಪ್ರಾರಂಭವಾದ ಅಕ್ಷರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಸ್ತುತ ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಣ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಾರಕ್ಕೊಂದು ದಿನ ಬ್ಯಾಗ್‌ಲೆಸ್ ಡೇ ಕಡ್ಡಾಯ ಮಾಡಲಾಗಿದೆ. ಅಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ಭಾಷಾ ಪ್ರಾವೀಣ್ಯತೆ ಹೆಚ್ಚಿಸಲು ಪ್ರಾಮುಖ್ಯತೆ ಕೊಡಲಾಗುತ್ತದೆ. ಸುಮಾರು ಹತ್ತು ಎಕರೆಯಲ್ಲಿರುವ ಸಂಸ್ಥೆಯಲ್ಲಿ ವಿಶಾಲವಾದ ಆಟದ ಮೈದಾನ, ನುರಿತ ಬೋಧಕ ವರ್ಗದ ಜತೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಮಂಡ್ಯ, ಮದ್ದೂರು, ನಾಗಮಂಗಲ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಈಗಾಗಲೇ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಹೆಗ್ಗಳಿಕೆ ಹೊಂದಿದೆ. ದಕ್ಷಿಣ ಭಾರತ ಮಟ್ಟದ ಸಿಬಿಎಸ್‌ಇ ವಿದ್ಯಾರ್ಥಿಗಳ ಈಜು ಸ್ಪರ್ಧೆಯನ್ನು ಆಯೋಜಿಸಿ ಯಶಸ್ವಿಗೊಳಿಸಿದ ಕೀರ್ತಿ ಅಕ್ಷರ ಸ್ಕೂಲ್‌ಗಿದೆ. ಪ್ರಸ್ತುತ ನಾಲ್ಕರಿಂದ ಹತ್ತನೇ ತರಗತಿವರೆಗೆ ಬಾಲಕರಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ಇನ್ನು ನಾಗಮಂಗದಲ್ಲಿ ಮಾಂಟೆಸ್ಸೋರಿಯನ್ನು ಪ್ರಾರಂಭಿಸಲಾಗಿದೆ. ನಾಗಮಂಗಲ ಮುಖ್ಯರಸ್ತೆ ಸಂಸ್ಥೆ ಪ್ರಾರಂಭವಾಗಿದೆ. ಪ್ರೀಕೆಜಿ, ಎಲ್‌ಕೆಜಿ, ಯುಕೆಜಿ ದಾಖಲಾತಿ ನಡೆಯುತ್ತಿದೆ.
ಗ್ರಾಮೀಣ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಸಿಬಿಎಸ್‌ಇ ಶಾಲೆಯನ್ನು ಪ್ರಾರಂಭ ಮಾಡಲಾಯಿತು. ನಮ್ಮ ಸಂಸ್ಥೆಯಲ್ಲಿ ನುರಿತ ಅಂತಾರಾಜ್ಯ ಶಿಕ್ಷಕ ವರ್ಗವಿದೆ. ಕಲಿಕೆಗೆ ಅವಶ್ಯಕವಿರುವ ಎಲ್ಲ ರೀತಿಯ ಆಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಲೇ ನಮ್ಮ ಶಾಲೆಗೆ ಹಲವು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಡಾ.ಟಿ.ಎನ್.ಧನಂಜಯ ಸಂಸ್ಥಾಪಕ ಅಧ್ಯಕ್ಷರು, ಅಕ್ಷರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್