ಚನ್ನಂಗಿ ಶಾಲೆಯಲ್ಲಿ ಅಕ್ಷರ ಸಂಜೆ ಕಾರ್ಯಕ್ರಮ

Published on

ಸಿದ್ದಾಪುರ: ಕಾಡಂಚಿನ ಚನ್ನಂಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತಿಂಗಳಿಗೊಂದು ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಶ್ಲಾಘನೀಯ ಎಂದು ಚನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ತಿಳಿಸಿದ್ದಾರೆ.

ಶಾಲೆ ಆವರಣದಲ್ಲಿ ಶನಿವಾರ ಸಂಜೆ ನಡೆದ ಅಕ್ಷರ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚನ್ನಂಗಿ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ತಮ್ಮದೇ ಆದ ಪ್ರತಿಭೆ ಅನಾವರಣಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರು ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮಾಜ ಸೇವಕ ಡಾ.ಎ.ಸಿ.ಗಣಪತಿ ಮಾತನಾಡಿ, ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ರೀತಿಯ ಸಹಕಾರ ನೀಡಲಾಗಿದ್ದು, ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ಬರಲು ದಾನಿಗಳು ಸಹಕಾರ ನೀಡಬೇಕು ಎಂದರು.

ಆದಿವಾಸಿ ಮುಖಂಡ ಸಿದ್ದಪ್ಪ ಮಾತನಾಡಿ, ಕಾಡಂಚಿನಲ್ಲಿರುವ ಗ್ರಾಮೀಣ ಭಾಗದ ಶಾಲೆಗೆ ದಾನಿಗಳು ಸಹಕಾರದಿಂದ ಬಡ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ವಿವಿಧ ವೃತ್ತಿಪರ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮುಖ್ಯ ಶಿಕ್ಷಕಿ ಸುಷಾ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಹಲವು ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಕಾಡುಪ್ರಾಣಿಗಳ ಭಯದ ನಡುವೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನದ ವ್ಯವಸ್ಥೆ ಮಾಡಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ.ಸುಷಾ ಮಾತನಾಡಿ, ಶಾಲೆಯಲ್ಲಿರುವ 52 ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕಲಿಕೆಗೆ ಪೂರಕವಾಗಿ ಗುಣಾತ್ಮಕ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಗಳನ್ನು ಆಯೋಜಿಸುತ್ತಿದ್ದೇವೆ. ಅಲ್ಲದೆ ತಿಂಗಳಿಗೊಂದು ಶೈಕ್ಷಣಿಕ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಈ ತಿಂಗಳಿನಲ್ಲಿ ಅಕ್ಷರ ಸಂಜೆ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ ಎಂದರು.

ಅಕ್ಷರ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ, ಗಾಯನ ಎಲ್ಲರ ಗಮನ ಸೆಳೆಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೇಬಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜು, ನಾಗರಾಜು, ರೋಹಿಣಿ, ಶಿಲ್ಪ ವಕೀಲ ಉತ್ತಪ್ಪ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಈಶ್ವರಿ, ಶಾಲಾ ಶಿಕ್ಷಕರಾದ ಸತೀಶ್, ಪ್ರತಿಮಾ, ಮಂಜುಳಾ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net