

ಉಡುಪಿ: ಕನಿಷ್ಠ 6 ಸಾವಿರ ರೂ. ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಡುಪಿ ತಾಲೂಕು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಬಿಸಿಯೂಟ ನೌಕರರು ಅಜ್ಜರಕಾಡಿನ ಹುತಾತ್ಮ ಸೈನಿಕ ಸ್ಮಾರಕ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷ ದಾಸ್ ಭಂಡಾರಿ ಮಾತನಾಡಿ, ರಾಜ್ಯದಲ್ಲಿ 1 ಲಕ್ಷ 18 ಸಾವಿರ ಬಿಸಿಯೂಟ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಅವರನ್ನು ನೌಕರರೆಂದು ಪರಿಗಣಿಸಿ, ಸಮಾನ ವೇತನ, ಪಿಂಚಣಿ, ಇಎಸ್‌ಐ ಸೌಲಭ್ಯ ನೀಡಬೇಕು. ದುಡಿಮೆಗೆ ಸರಿಸಮಾನ ವೇತನ ಕೊಡಬೇಕು ಎಂದು ಆಗ್ರಹಿಸಬೇಕು.
ಬಿಸಿಯೂಟ ನೌಕರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸರ್ಕಾರ ಕೊಟ್ಟ ಮಾತಿನಂತೆ ಕೂಡಲೇ ವೇತನ ಹೆಚ್ಚಳ ಮಾಡಬೇಕು. ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಾಲೆಯಲ್ಲಿ ದುಡಿಸಿಕೊಳ್ಳುತ್ತಾರೆ. ಸರ್ಕಾರವು 2,700 ಹಾಗೂ ಸಹಾಯಕಿಯರಿಗೆ 2,600 ವೇತನ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇಷ್ಟು ಕಡಿಮೆ ವೇತನದಲ್ಲಿ ನಾವು ಹೇಗೆ ಜೀವನ ನಡೆಸುವುದು, ಸರ್ಕಾರ ಕನಿಷ್ಠ ವೇತನವಾದರೂ ಕೊಡಲಿ ಎಂದು ಬಿಸಿಯೂಟ ನೌಕರರು ಅಳಲು ತೋಡಿಕೊಂಡರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್, ಕೋಶಾಧಿಕಾರಿ ಶಶಿಧರ್ ಗೊಲ್ಲ, ಸಂಘದ ಉಡುಪಿ ತಾಲೂಕು ಅಧ್ಯಕ್ಷೆ ಸುನಂದಾ, ಕಾರ್ಯದರ್ಶಿಗಳಾದ ಕಮಲಾ, ಗಿರಿಜಾ, ರತ್ನಾ, ಸಿಐಟಿಯು ತಾಲೂಕು ಅಧ್ಯಕ್ಷ ರಾಮ ಕರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್, ಉಮೇಶ್ ಕುಂದರ್, ನಳಿನಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.