ನಾಲ್ವಡಿ ಆಡಳಿತ ಜನಪ್ರತಿನಿಧಿಗಳಿಗೆ ಮಾದರಿ: ಕವಿ ಡಾ.ಜೋಗಿಗೌಡ ಬಣ್ಣನೆ

kadal photos (10)
Published on

ಮಂಡ್ಯ: ಆಡಳಿತದ ಮೂಲಕ ಮನೆಮಾತಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಯೊಬ್ಬ ಜನಪ್ರತಿನಿಧಿಗೂ ಮಾದರಿ ಎಂದು ಕವಿ ಡಾ.ಜೋಗಿಗೌಡ ಬಣ್ಣಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ವತಿಯಿಂದ ಮಾಜಿ ಸಚಿವ ದಿ.ಎಸ್.ಡಿ.ಜಯರಾಂ ಸ್ಮರಣಾರ್ಥ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ದ್ವಿತೀಯ ಕನ್ನಡ ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ನಾಲ್ವಡಿ ಆಡಳಿತವನ್ನು ಜನ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅವರ ಕೆಲಸಗಳು ಜೀವಂತವಾಗಿದ್ದು, ನವ ಕರ್ನಾಟಕ ನಿರ್ಮಾಣದಲ್ಲಿ ಅವರ ಕೊಡುಗೆ ಬಹಳ ದೊಡ್ಡದಿದೆ ಎಂದು ಸ್ಮರಿಸಿದರು.

ಹಳೇ ಮೈಸೂರು ಭಾಗದ ಜನ ಇಂದಿಗೂ ಕನ್ನಂಬಾಡಿ ಅಣೆಕಟ್ಟೆಯ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂದರೆ ಅದಕ್ಕೆ ನಾಲ್ವಡಿ ಕಾರಣ. ಅಂದಿನ ಕಾಲದಲ್ಲೇ ಶಿಕ್ಷಣ ಕ್ಷೇತ್ರಕ್ಕೆ 450 ಕೋಟಿ ರೂ ಮೀಸಲಿಟ್ಟು ಶಾಲೆಗಳನ್ನು ತೆರೆದರು. ಮಹಿಳೆಯರಿಗೆ ಹಕ್ಕು ಪತ್ರ ನೀಡಿದರು. ವಿಧವಾ ವೇತನವನ್ನು ಜಾರಿಗೆ ತಂದವರು ನಾಲ್ವಡಿ ಎಂದರು.

ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ವೈದ್ಯ ಡಾ.ಸಿ.ಎಂ.ಪರಮೇಶ್, ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಸಂಘಟಕ ಕಾರಸವಾಡಿ ಮಹದೇವು ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕರ್ನಾಟಕ ಸೇವಾರತ್ನ, ಕವಿರತ್ನ ಪ್ರಶಸ್ತಿ, ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net