

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಅಕ್ರಮ ಕಟ್ಟಡಗಳ ಸಕ್ರಮಕ್ಕಾಗಿ ರಾಜ್ಯಾದ್ಯಂತ ಜನ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸದಲ್ಲಿರುವ ಸರ್ಕಾರ ಇನ್ನೊಂದೆಡೆ ಪರ್ಯಾಯ ಮಾರ್ಗಗಳಿಗೂ ಹುಡುಕಾಟ ಆರಂಭಿಸಿದೆ. ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಅವರು ಎರಡು ತಿಂಗಳಿನಲ್ಲಿ ಅಕ್ರಮ-ಸಕ್ರಮ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದರು. ಬಿಬಿಎಂಪಿ ಹಾಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಕ್ರಮ-ಸಕ್ರಮ ಜಾರಿಗೆ ಬಿಜೆಪಿ ಉತ್ಸುಕವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಸಚಿವರ ಜತೆ ಸಾಕಷ್ಟು ಚರ್ಚೆ ನಡೆಸಿದ್ದಾರೆ.
ಕೋರ್ಟ್ನದ್ದೇ ಭಯ: ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಇದೆ. ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಸಂಘಸಂಸ್ಥೆಗಳು ಮೊಕದ್ದಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಜತೆ ಸರ್ಕಾರ ಚರ್ಚೆ ನಡೆಸಿದೆ. ಆದರೆ ಸಂಘಸಂಸ್ಥೆಗಳ ಬೇರೆ ಬೇರೆ ಮುಖಂಡರು ಅಕ್ರಮ ಇರುವುದನ್ನು ಸಕ್ರಮ ಮಾಡುವ ಪರಿಪಾಠ ಒಳ್ಳೆಯದಲ್ಲ ಎಂದೇ ಹಠ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೊಕದ್ದಮೆ ದಾಖಲಿಸಿರುವವರ ಮೂಲಕ ಹಿಂದಕ್ಕೆ ತೆಗೆಸುವುದು ಅಥವಾ ತಡೆಯಾಜ್ಞೆ ತೆರವಿಗೆ ಸರ್ಕಾರ ಪ್ರಯತ್ನ ನಡೆಸುವುದು ಈಗ ಇರುವ ದಾರಿಗಳಾಗಿವೆ. ಒಮ್ಮೆ ಮೊಕದ್ದಮೆ ಹಿಂದಕ್ಕೆ ಪಡೆದರೂ ಇನ್ನೊಬ್ಬರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯೂ ಇಲ್ಲದೇ ಇಲ್ಲ.
ಕಾನೂನು ಇಲಾಖೆ ಅಭಿಪ್ರಾಯವೇನು?: ದಂಡ ಶುಲ್ಕವಿಲ್ಲದೇ ಕೇವಲ ಸುಧಾರಣಾ ವೆಚ್ಚ ಮಾತ್ರ ಭರಿಸುವುದು ಸರಿಯಲ್ಲ. ಅಕ್ರಮಗಳಿಗೆ ಸುಧಾರಣಾ ವೆಚ್ಚದ ಜತೆಗೆ ಸ್ವಲ್ಪವಾದರೂ ದಂಡ ಇರಲೇಬೇಕು. ದಂಡ ಇಲ್ಲದೇ ಇದ್ದರೆ ಅಕ್ರಮಗಳು ಇಲ್ಲಿಗೆ ನಿಲ್ಲುವುದಿಲ್ಲ, ಮುಂದೆ ಸಕ್ರಮವಾಗುತ್ತದೆ ಎಂಬ ನಿಲುವಿಗೆ ಬಂದು ಅಕ್ರಮ ನಿರ್ವಣಗಳು ಹೆಚ್ಚಾಗಬಹುದು, ಕಾನೂನಿಗೆ ಬೆಲೆಯೇ ಇಲ್ಲದಂತಾಗುತ್ತದೆ ಎಂಬ ಅಭಿಪ್ರಾಯ ಕಾನೂನು ಇಲಾಖೆಯದೆಂದು ಮೂಲಗಳು ಹೇಳುತ್ತವೆ.
ದಂಡ ಹಾಕುವ ವಿಚಾರದಲ್ಲಿ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ. ಕೇವಲ ಸುಧಾರಣಾ ವೆಚ್ಚ ಮಾತ್ರ ಹಾಕುವ ಮೂಲಕ ಅಕ್ರಮ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ. ನಗರ ಯೋಜನಾ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಮುಂದು ಮಾಡಿ ಅಕ್ರಮ ಸಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಸಚಿವರು ಟೌನ್ ಅಂಡ್ ಕಂಟ್ರಿ ಪ್ಲಾ್ಯನಿಂಗ್ ಕಾಯ್ದೆಗೆ ಬದಲಾವಣೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಬಿ-ಪ್ಯಾಕ್ ಹೇಳಿದ್ದೇನು?: ಬಡವರು ಮತ್ತು ಮಧ್ಯಮ ವರ್ಗದವರ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲು ತಮ್ಮ ಅಭ್ಯಂತರವಿಲ್ಲ. ಆದರೆ ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಶ್ರೀಮಂತರ ಕಟ್ಟಡಗಳು ಸಕ್ರಮ ಆಗಬಾರದು ಎಂದು ಬೆಂಗಳೂರಿಗೆ ಸಂಬಂಧಿಸಿದಂತೆ ಬಿ ಪ್ಯಾಕ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಅದರ ಆಧಾರದಲ್ಲಿಯೇ ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆಸಿದೆ. ಮೊಕದ್ದಮೆ ಹೂಡಿರುವವರು ಅದನ್ನು ವಾಪಾಸು ಪಡೆಯುವ ಸಾಧ್ಯತೆ ಕಡಿಮೆ.
ತೆರಿಗೆ ವ್ಯಾಪ್ತಿಗೆ: ಅಕ್ರಮ-ಸಕ್ರಮ ಎಂದರೆ ತಪ್ಪು ಅಭಿಪ್ರಾಯ ಮೂಡುತ್ತದೆ. ತೆರಿಗೆ ಕಟ್ಟದೆ ದೂರವಿದ್ದು, ನಾಗರಿಕ ಸೌಲಭ್ಯ ಪಡೆಯುವವರನ್ನು ತೆರಿಗೆ ವ್ಯಾಪ್ತಿಗೆ ತರುವುದು ಎಂಬ ಅಭಿಪ್ರಾಯ ಮೂಡಿಸಲು ಸರ್ಕಾರ ನಿರ್ಧರಿಸಿದೆ.
ರಾಜಕೀಯ ಕಾರಣ: ಅಕ್ರಮ-ಸಕ್ರಮಕ್ಕೆ ಬಹಳ ವರ್ಷದಿಂದ ಜನ ಕಾಯುತ್ತಿದ್ದಾರೆ. ಈ ನಿಯಮ ಜಾರಿಗೆ ತಂದರೆ ಲಕ್ಷಾಂತರ ಜನರಿಗೆ ಅನುಕೂಲವಾಗಿ ಬಿಜೆಪಿಗೆ ಅದು ಮತವಾಗಿ ಪರಿವರ್ತನೆ ಆಗುತ್ತದೆ ಎಂಬುದು ಪ್ರಮುಖ ಉದ್ದೇಶವಾಗಿದೆ.
ಸುಪ್ರೀಂಕೋರ್ಟ್ ಮುಂದೆ ಒಂದು ಅವಧಿಗೆ ಸಕ್ರಮ ಮಾಡುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಲಿದ್ದೇವೆ. ಅಲ್ಲಿಯೇ ಪ್ರಕರಣ ಇತ್ಯರ್ಥವಾಗುವ ವಿಶ್ವಾಸವಿದೆ. ಬಹಳ ವರ್ಷಗಳಿಂದ ಕಾಯುತ್ತಿರುವವರಿಗೆ ನ್ಯಾಯ ಆದಷ್ಟು ಬೇಗ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಏನಿದು ಅಕ್ರಮ-ಸಕ್ರಮ?: ಕಟ್ಟಡಗಳನ್ನು ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿರುವುದು ಅಕ್ರಮವಾಗುತ್ತದೆ. ಅದನ್ನು ಸಕ್ರಮ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ. 2010 ರಿಂದಲೂ ರಾಜ್ಯದಲ್ಲಿ ಅಕ್ರಮ ಸಕ್ರಮದ ಚರ್ಚೆ ನಡೆದಿದೆ. ಆಗಿನ ಸರ್ಕಾರ ತಂದ ಕಾಯ್ದೆ ಈಗ ಸುಪ್ರೀಂಕೋರ್ಟ್ ಮುಂದಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಹ ಈ ವಿಚಾರದಲ್ಲಿ ಏನೇನು ಮಾರ್ಗಗಳಿವೆ ಎಂಬ ಬಗ್ಗೆ ಹುಡುಕಾಟ ನಡೆಸಿದೆ.
ನಿವೇಶನ ಮಾತ್ರ ಸಕ್ರಮ?: ಕಟ್ಟಡಗಳನ್ನು ಸಕ್ರಮ ಮಾಡಲು ಅಡ್ಡಿಗಳಿರುವುದರಿಂದ ಸದ್ಯಕ್ಕೆ ನಿವೇಶನಗಳನ್ನು ಮಾತ್ರ ಸಕ್ರಮ ಮಾಡಿಕೊಡುವ ಬಗ್ಗೆಯೂ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ.
ಮುಂದೇನು?: ಒಂದು ವೇಳೆ ನ್ಯಾಯಾಲಯದಿಂದ ತಡೆಯಾಜ್ಞೆ ತೆರವಾದರೂ ಮತ್ತೆ ಬಿಬಿಎಂಪಿ ಕಾಯ್ದೆ ಮತ್ತು ಪೌರಾಡಳಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ನಿಯಮಗಳನ್ನು ರೂಪಿಸಿ ಕೊಳ್ಳಬೇಕಾಗುತ್ತದೆ ಎಂದು ನಗರಾಭಿವೃದ್ದಿ ಇಲಾಖೆಯ ಮೂಲಗಳು ಹೇಳುತ್ತವೆ. ಆ ಕೆಲಸ ತಕ್ಷಣಕ್ಕೆ ಆಗುವ ಸಾದ್ಯತೆಗಳಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.