ಎಕೆಎಂಎಸ್​ ಖಾಸಗಿ ಬಸ್​ ಮಾಲೀಕನ ಬರ್ಬರ ಹತ್ಯೆ

Murder
Published on

ಕೊಡವೂರು ಸಮೀಪದ ನಾಗಬನ ಸಮೀಪದ ಮನೆಯಲ್ಲಿ ಘಟನೆ

ಚಾಕು, ತಲವಾರ್​ನಿಂದ ಕ್ರೂರವಾಗಿ ಕೊಚ್ಚಿ ಕೊಲೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಸಾರಿಗೆ ಸೇವೆ ನೀಡುತ್ತಿದ್ದ ಎಕೆಎಂಎಸ್​ ಖಾಸಗಿ ಬಸ್​ ಸಂಸ್ಥೆಯ ಮಾಲೀಕ ಸೈಫುದ್ದೀನ್​ ಅಲಿಯಾಸ್​ ಸೈಫ್​ (52) ಅವರನ್ನು ಮಲ್ಪೆಯ ಕೊಡವೂರು ಸಮೀಪದ ನಾಗಬನದ ಬಳಿ ಇರುವ ಮನೆಯಲ್ಲಿ ಶನಿವಾರ (ಸೆ.27) ಬೆಳಗ್ಗೆ ಚಾಕು, ತಲವಾರ್​ನಿಂದ ಕೊಚ್ಚಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಮೂಲತಃ ಆತ್ರಾಡಿ ನಿವಾಸಿಯಾಗಿರುವ ಸೈಫ್​, ಇತ್ತೀಚೆಗೆ ಮಲ್ಪೆಯ ಸಾಲ್ಮರದ ಬಳಿ ಮನೆ ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಬೆಳಗ್ಗೆ 10:30ರ ಬಳಿಕ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ದೇಹದ ಹಲವೆಡೆ ಕ್ರೂರವಾಗಿ ಇರಿದ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

18ಕ್ಕೂ ಹೆಚ್ಚು ಕ್ರಿಮಿನಲ್​ ಪ್ರಕರಣ, ರೌಡಿಶೀಟರ್​

ಎಕೆಎಂಎಸ್​ ಹೆಸರಿನಲ್ಲಿ ಅನೇಕ ಬಸ್​ ಹೊಂದಿರುವ ಸೈಫ್​, ಉಡುಪಿ ಹಾಗೂ ಹಿರಿಯಡ್ಕ ಠಾಣೆಯ ರೌಡಿಶೀಟರ್​ ಕೂಡ ಆಗಿದ್ದಾರೆ. ಅವರ ವಿರುದ್ಧ 18ಕ್ಕೂ ಹೆಚ್ಚು ಕ್ರಿಮಿನಲ್​ ಪ್ರಕರಣ ದಾಖಲಾಗಿದೆ. ಅಲ್ಲದೆ, ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯೂ ಆಗಿದ್ದಾರೆ.

ಮಾತನಾಡಲು ಕರೆದು ಸ್ನೇಹಿತರೇ ಕೊಂದರಾ?

ಸೈಫುದ್ದೀನ್ ಅವರನ್ನು ಸ್ನೇಹಿತರೇ ಹತ್ಯೆ ಮಾಡಿದ್ದಾಗಿ ಮಾಹಿತಿ ಲಭಿಸಿದೆ. ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾದ ಫೈಜಲ್​ ಖಾನ್​ ಮತ್ತು ಉಡುಪಿ ದೊಡ್ಡಣಗುಡ್ಡೆಯ ನಿವಾಸಿ ಮಹಮ್ಮದ್​ ಶರೀಫ್ ಮತ್ತು ಸುರತ್ಕಲ್​ನ ಚೊಕ್ಕಬೆಟ್ಟಿನ ಶುಕ್ರು ಯಾನೆ ಅದ್ದು ಎಂಬವರು ಸೈಫುದ್ದೀನ್ ಅವರ ಸ್ನೇಹಿತರಾಗಿದ್ದು ಅವರೆಲ್ಲ ಎಕೆಎಂಎಸ್​ ಬಸ್​ನ ಚಾಲಕರಾಗಿ ದುಡಿಯುತ್ತಿದ್ದರು. ಈ ಮೂವರೂ ಸೈಫುದ್ದೀನ್​ ಅವರನ್ನು ಕೊಲೆ ಮಾಡಲು ಮಣಿಪಾಲದ ಕಾಯಿನ್​ ಸರ್ಕಲ್​ನಿಂದ ಒಂದೇ ಕಾರಿನಲ್ಲಿ ಮಲ್ಪೆಗೆ ತೆರಳಿದ್ದರು. ಮಾತನಾಡುವುದಿದೆ ಮಂಗಳೂರಿಗೆ ಹೋಗೋಣ ಎಂದು ತಿಳಿಸಿ ಬೆಳಗ್ಗೆ 10:15ರಿಂದ 11:30ರ ಸಮಯದಲ್ಲಿ ಮಲ್ಪೆ ಕೊಡವೂರು ಗ್ರಾಮದ ನಾಗಬನದ ಬಳಿ ಇರುವ ಸೈಫುದ್ದೀನ್​ ಮನೆಗೆ ಬಂದಿದ್ದಾರೆ. ಆತ ಬಾಗಿಲು ತೆಗೆದಕೂಡಲೇ ಚಾಕು, ತಲವಾರ್​ನಿಂದ ತಲೆ ಮತ್ತು ಬೆನ್ನನ್ನು ಕೊಚ್ಚಿ ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತು ಸೈಫುದ್ದೀನ್ ಪುತ್ರ ನೀಡಿದ ದೂರಿನಂತೆ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳು ಠಾಣೆಗೆ ಬಂದು ಶರಣಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಮೂವರು ದುಷ್ಕರ್ಮಿಗಳು ಏಕಕಾಲದಲ್ಲಿ ಸೈಫುದ್ದೀನ್​ ಮೇಲೆ ಚಾಕು, ತಲವಾರ್​ನಿಂದ ದಾಳಿ ನಡೆಸಿದ್ದಾರೆಂಬ ಮಾಹಿತಿಯಿದೆ. ಆರೋಪಿಗಳು ಎಕೆಎಂಎಸ್​ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದವರು ಎಂದು ಶಂಕಿಸಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಳೆಯ ವೈಮನಸ್ಸಿನಿಂದಾಗಿ ಪ್ರತಿಕಾರದ ಕೊಲೆ ಆಗಿದೆಯೇ ಅಥವಾ ಬೇರೆ ಕಾರಣವಿದೆಯೇ ಇನ್ನೂ ತಿಳಿದಿಲ್ಲ. ತನಿಖೆಗಾಗಿ ಮೂರು ತಂಡ ರಚಿಸಲಾಗಿದೆ. | ಹರಿರಾಂ ಶಂಕರ್​. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net