ಸೈಫುದ್ದೀನ್ ಕೊಲೆ ಪ್ರಕರಣ, ಮೂವರು ಬಂಧನ

Murder 1
Published on

ಎಕೆಎಂಎಸ್​ ಖಾಸಗಿ ಬಸ್​ಗಳ ಮಾಲೀಕ

ಸೆ.27ರಂದು ಬೆಳಗ್ಗೆ ನಡೆದಿದ್ದ ಹತ್ಯೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಸಾರಿಗೆ ಸೇವೆ ನೀಡುತ್ತಿದ್ದ ಎಕೆಎಂಎಸ್​ ಖಾಸಗಿ ಬಸ್​ ಸಂಸ್ಥೆಯ ಮಾಲೀಕ, ರೌಡಿಶೀಟರ್​ ಸೈಫುದ್ದೀನ್​ ಅಲಿಯಾಸ್​ ಸೈಫ್​ (52) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಭಾನುವಾರ (ಸೆ.28) ಬಂಧಿಸಿದ್ದಾರೆ.

ಉಡುಪಿಯ 76 ಬಡಗಬೆಟ್ಟು ಗ್ರಾಮದ ಮಿಷನ್​ ಕಾಂಪೌಂಡ್​ ಸಮೀಪದ ನಿವಾಸಿ ಮಹಮ್ಮದ್​ ಫೈಸಲ್​ ಖಾನ್​ (27), ಉಡುಪಿ ಶಿವಳ್ಳಿ ಗ್ರಾಮದ ಕರಂಬಳ್ಳಿ ಜನತಾ ಕಾಲನಿಯ ಮಹಮ್ಮದ್​ ಶರೀಫ್​ (37), ಮಂಗಳೂರಿನ ಕಾಟಿಪಳ್ಳ ಗ್ರಾಮದ ಲಂಡನ್​ ಪಾರ್ಕ್​ ಹಿಂಭಾಗದ 7ನೇ ಬ್ಲಾಕ್​ ನಿವಾಸಿ ಅಬ್ದುಲ್​ ಶುಕುರ್​ (43) ಬಂಧಿತರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಾರಾಗ್ರಹಕ್ಕೆ ರವಾನಿಸಲಾಗಿದೆ. ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆ ಸಿಪಿಐ ರಾಮಚಂದ್ರ ನಾಯಕ, ಪಿಎಸ್​ಐ ಅನಿಲಕುಮಾರ್​ ಡಿ. ಹಾಗೂ ಮಲ್ಪೆ ಠಾಣೆಯ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.

ಸ್ನೇಹಿತರಿಂದಲೇ ಮರ್ಡರ್​

Murder 2
Murder 3
Murder 4
ಎಕೆಎಂಸ್​ ಬಸ್​ ಮಾಲೀಕ ಸೈಫುದ್ದೀನ್​ ಮೂಲತಃ ಆತ್ರಾಡಿ ನಿವಾಸಿಯಾಗಿದ್ದು, ಸ್ನೇಹಿತರಿಂದಲೇ ಹತ್ಯೆಯಾಗಿದ್ದಾರೆ. ಬಸ್​ ವ್ಯವಹಾರದ ಕುರಿತಾಗಿ ಮಾತನಾಡುವುದಿದೆ. ಮಂಗಳೂರಿಗೆ ಹೋಗೋಣ ಎಂದು ಸೆ.27ರಂದು ಬೆಳಗ್ಗೆ ಇದೀಗ ಬಂಧನಕ್ಕೊಳಗಾಗಿರುವ ಮೂವರು ಸ್ನೇಹಿತರು ಸೈಫುದ್ದೀನ್ ಗೆ ತಿಳಿಸಿದ್ದರು. ಬಳಿಕ ಮಣಿಪಾಲದಲ್ಲಿದ್ದ ಸೈಫುದ್ದೀನ್​ ಮನೆಯಿಂದ ಒಂದೇ ಕಾರಿನಲ್ಲಿ ಎಲ್ಲರೂ ತೆರಳಿದ್ದರು. ಇತ್ತೀಚೆಗೆ ಮಲ್ಪೆ ಕೊಡವೂರು ಸಮೀಪದ ಸಾಲ್ಮರದ ನಾಗಬನದ ಬಳಿ ಖರೀದಿಸಿದ್ದ ಮನೆಗೆ ಬೆಳಗ್ಗೆ 10:30ರ ಬಳಿಕ ಬಂದಿದ್ದರು. ಸೈಫುದ್ದೀನ್​ ಅವರು ಮನೆಯ ಬಾಗಿಲು ತೆರೆಯುತ್ತಿದ್ದಾಗ ಹಿಂಬದಿಯಲ್ಲಿದ್ದ ಸ್ನೇಹಿತರು ತಲವಾರ್​ ಹಾಗೂ ಚಾಕುಗಳಿಂದ ಸೈಫುದ್ದೀನ್ ತಲೆ ಹಾಗೂ ಬೆನ್ನನ್ನು ಮನಬಂದಂತೆ ಕೊಚ್ಚಿದ್ದರು. ತೀವ್ರ ರಕ್ತಸ್ರಾವದಿಂದ ಮನೆಯ ಬಾಗಿಲಲ್ಲೇ ಸೈಫುದ್ದೀನ್​ ಮೃತಪಟ್ಟಿದ್ದರು. ಬಳಿಕ ಮೂವರು ಸ್ನೇಹಿತರು ಅಲ್ಲಿಂದ ಕಾರಿನ ಮೂಲಕ ಪರಾರಿಯಾಗಿದ್ದರು.

ಮೃತ ಸೈಫುದ್ದೀನ್​ ಪುತ್ರ ದೂರು ನೀಡಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚಿಸಲಾಗಿತ್ತು.

ಆತ್ರಾಡಿ ಮಸೀದಿಯಲ್ಲಿ ಅಂತ್ಯ ಸಂಸ್ಕಾರ

ಹತ್ಯೆಯಾದ ಸೈಫುದ್ದೀನ್​ ಅವರ ಮರಣೋತ್ತರ ಪರೀಕ್ಷೆಯು ಶನಿವಾರ ರಾತ್ರಿ ಮಣಿಪಾಲದ ಕೆಎಂಸಿಯಲ್ಲಿ ನಡೆದಿದ್ದು, ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಭಾನುವಾರ ಬೆಳಗ್ಗೆ ಮಣಿಪಾಲದಲ್ಲಿರುವ ಅವರ ಮನೆಯಿಂದ ಆತ್ರಾಡಿಯಲ್ಲಿರುವ ಮಸೀದಿಯವರೆಗೆ ಮೃತದೇಹದ ಮೆರವಣಿಗೆ ನಡೆಯಿತು. ಅವರೇ ಮಾಲೀಕರಾಗಿದ್ದ ಅನೇಕ ಬಸ್​ಗಳು, ಚಾಲಕರು, ನಿರ್ವಾಹಕರು ಹಾಗೂ ನೂರಾರು ಮಂದಿ ಪಾಲ್ಗೊಂಡಿದ್ದರು. ಮಸೀದಿಯಲ್ಲಿ ಅಂತಿಮ ದರ್ಶನ ವ್ಯವಸ್ಥೆಯ ಬಳಿಕ ಅಂತ್ಯ ಸಂಸ್ಕಾರ ನೆರವೇರಿತು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net