

ಅಕ್ಕಿಆಲೂರ: ಭಾರತದ ಸನಾತನ ಸಂಸ್ಕೃತಿ ಜಗತ್ತಿನ ಉದ್ಧಾರ ಬಯಸುತ್ತದೆ. ಯೋಗದ ಮೂಲಕ ಮನುಕುಲದ ಆರೋಗ್ಯ ನಿರ್ಮಾಣವಾಗುತ್ತಿದೆ ಎಂದು ಹುಬ್ಬಳ್ಳಿಯ ಶ್ರೀ ಪತಂಜಲಿ ಯೋಗ ಶಿಬಿರ ಚಿಂತನ ಕೂಟದ ಅಧ್ಯಕ್ಷ ಕೈಲಾಸ ಹಿರೇಮಠ ಹೇಳಿದರು.
ಪಟ್ಟಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಯೋಗ ಚಿಂತನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತಂಜಲಿ ಮಹರ್ಷಿಗಳ ಆದಿಯಾಗಿ ಭರತಖಂಡದಲ್ಲಿ ಜನಿಸಿದ ಎಲ್ಲ ಮಹಾನ್ ಪುರುಷರು ಬೋಧಿಸಿದ, ಸಂಸ್ಕೃತ, ವೇದ, ಉಪನಿಷತ್ತು, ಭಗವದ್ಗೀತೆ, ಯೋಗ, ರಾಮಾಯಣ, ಮಹಾಭಾರತಗಳು ವಿಶ್ವದ ಪ್ರತಿಯೊಬ್ಬರನ್ನು ಧರ್ಮದ ಹಾದಿಯಲ್ಲಿ ನಡೆಸುತ್ತಿವೆ. ಯಾವುದೇ ಧರ್ಮ, ಜಾತಿ ಭೇದಭಾವ ಇಲ್ಲದೇ ಎಲ್ಲರ ಕಲ್ಯಾಣ ಬಯಸಿದ ಭಾರತದ ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ತರಬೇತುದಾರ ಮಧು ದಾನಮ್ಮನವರ ಮಾತನಾಡಿ, ಕಳೆದ 42 ವರ್ಷಗಳಿಂದ ಸಂಸ್ಕಾರ, ಸೇವೆ ಮತ್ತು ಸಂಘಟನೆ ತತ್ವದಡಿ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಗ್ರಾಮೀಣ ಪ್ರದೇಶದಲ್ಲಿ ಶಿಬಿರ ಆಯೋಜಿಸಿ ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸುತ್ತಿದೆ ಎಂದರು.
ಕಾರ್ಯಕ್ರಮದ ಬಳಿಕ ಗ್ರಾಪಂ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಯೋಗ ನಡೆಗೆ, ಸ್ವಚ್ಛತಾ ಅಭಿಯಾನ ಜರುಗಿತು. ಬಸವರಾಜ ಗೊಂದಿ, ಮುತ್ತಣ್ಣ ಮುಚ್ಚಂಡಿ, ಅರುಣ ಬಳ್ಳಾರಿ, ವಿಶ್ವನಾಥ ಭಿಕ್ಷಾವರ್ತಿಮಠ, ವೀರನಗೌಡ ಕೆರಿಮನಿ, ಶಿವಕುಮಾರ ದೇಶಮುಖ, ಚನ್ನವೀರ ಬೆಲ್ಲದ, ನಾಗಭೂಷಣ ಬೂದಿಹಾಳ, ಅನಿಲ ಚುಳಕಿ, ಶೋಭಾ ಪಾಟೀಲ, ನಂದಿನಿ ವಿರುಪಣ್ಣನವರ, ಹೇಮಾ ಮಹಾಲಿಂಗಶೆಟ್ಟರ್, ಕವಿತಾ ಮೋಟಗಿ, ಸಚಿನ್ ತಟ್ಟಿ, ವಿನಾಯಕ ಬಳ್ಳಾರಿ, ಶಿವರಾಜ ಕಂಬಾಳಿ, ನಿರ್ಮಲಾ ಪೂಜಾರ, ಶಿವಾನಂದ ದೇಸಾಯಿ, ನಾಗರತ್ನ ವರ್ಣೆಕರ್, ದೀಪಾ ವಿರುಪಣ್ಣನವರ, ವಿಶಾಲಾ ಚುಳಕಿ ಇದ್ದರು.