

ಅಕ್ಕಿಆಲೂರ: ಸಹಕಾರಿ ಬ್ಯಾಂಕ್‌ಗಳ ಜತೆಗೆ ಸರ್ಕಾರವಿದ್ದು, ಸ್ಥಗಿತಗೊಂಡಿರುವ ಸಹಕಾರಿ ಬ್ಯಾಂಕ್‌ಗಳ ಮರು ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳ ಅಧ್ಯಕ್ಷ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ ಅರ್ಬನ್ ಬ್ಯಾಂಕ್ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದ ಜನರ ಮತ್ತು ಬಡವರ ಅರ್ಥ ವ್ಯವಸ್ಥೆ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಬ್ಯಾಂಕ್‌ಗಳು ಪಾರದರ್ಶಕ ದಾಖಲೆಗಳನ್ನು ಪರಿಶೀಲಿಸಿ ಸಾಲ ನೀಡುವುದರ ಜತೆಗೆ ಸಾಲದ ಉಪಯೋಗದ ಬಗ್ಗೆಯೂ ಗಮನ ಹರಿಸಬೇಕು. ಒಟ್ಟು 56 ಸಾವಿರ ಕೋಟಿ ರೂ. ಸಹಕಾರಿ ಬ್ಯಾಂಕ್‌ಗಳ ಮೂಲಕ ಜನರಿಗೆ ಸಾಲದ ರೂಪದಲ್ಲಿ ದೊರೆಯಬೇಕು ಎಂಬ ಸಂಕಲ್ಪವಿದೆ. ಹಣ ಮಾಡಲು ಹಣ ನೀಡದೇ ಆರ್ಥಿಕವಾಗಿ ಜನರನ್ನು ಸದೃಢಗೊಳಿಸುವ ಮನೋಭಾವವನ್ನು ಸಹಕಾರಿ ಬ್ಯಾಂಕ್‌ಗಳು ಅಳವಡಿಸಿಕೊಳ್ಳಬೇಕು. ಇದಕ್ಕೆ ಅಕ್ಕಿಆಲೂರಿನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮಾದರಿಯಾಗಿದೆ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅಕ್ಕಿಆಲೂರ ಸಾಂಸ್ಕೃತಿಕ ಸಾಹಿತ್ಯಿಕ, ಶೈಕ್ಷಣಿಕ ಕ್ಷೇತ್ರದ ಜತೆಗೆ ಆರ್ಥಿಕತೆಗೂ ಹೆಸರುವಾಸಿಯಾಗಿದೆ. ಅಖಂಡ ಧಾರವಾಡ ಜಿಲ್ಲೆ ಇದ್ದಾಗಲೂ ಇಲ್ಲಿನ ಜನರ ಆರ್ಥಿಕ ಶಿಸ್ತು ಅನುಕರಣೀಯವಾಗಿದೆ ಎಂದರು. ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಶತಮಾನೋತ್ಸವ ಸಂದರ್ಭದಲ್ಲಿ ಕೂಡ ಸಾರ್ಥಕತೆ ಕಂಡ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಎಂದು ಪಟ್ಟಣದ ಸಹಕಾರಿ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿರುವುದು ಜಿಲ್ಲೆಯ ಹೆಮ್ಮೆ ಎಂದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. ಬ್ಯಾಂಕ್ ಸಂಸ್ಥಾಪಕ ಲಿಂಗಪ್ಪ ಬಸಪ್ಪ ಕೂಬಿಹಾಳ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು. ಕೂಬಿಹಾಳ ಮತ್ತು ಕಂಬಾಳಿ ಕುಟುಂಬಸ್ಥರಿಗೆ ಗೌರವ ಸಮರ್ಪಣೆ ಜರಗಿತು. ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಆರ್‌ಬಿಐ ಮುಖ್ಯಸ್ಥೆ ಮೀನಾಕ್ಷಿ ಗಡ, ಷಣ್ಮುಖಪ್ಪ ಮುಚ್ಚಂಡಿ, ರಾಜಶೇಖರ ಹಾವಣಗಿ, ಸತೀಶ ಕುಲಕರ್ಣಿ, ಸಿದ್ರಾಮಪ್ಪ ವಿರುಪಣ್ಣನವರ, ಬಸವರಾಜ ಕೋರಿ, ಎಸ್.ಎಸ್. ಬಮ್ಮಿಗಟ್ಟಿ, ನಾಗರಾಜ ವಿರುಪಣ್ಣನವರ ಇದ್ದರು. ಮೈಸೂರಿನ ಸುಮಾ ರಾಜಕುಮಾರ ನಿರ್ವಹಿಸಿದರು.