

ಅಕ್ಕಿಆಲೂರ: ಪ್ರತಿ ವರ್ಷ ದುಂಡಿಬಸವೇಶ್ವರ ಜನಪದ ಕಲಾ ಸಂಘದಿಂದ ಆಯೋಜಿಸುವ ಕನ್ನಡ ನುಡಿ ಸಂಭ್ರಮ ಈ ಬಾರಿ ಫೆ. 14, 15 ಮತ್ತು 16ರಂದು ಮೂಡಬಿದಿರೆಯ ಆಳ್ವಾಸ್ ವಿದ್ಯಾರ್ಥಿಗಳೊಂದಿಗೆ ಜರುಗಲಿದೆ ಎಂದು ಕಲಾ ಸಂಘದ ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ ಹೇಳಿದರು.
ಪಟ್ಟಣದ ಸಿಂಧೂರ ಸಿದ್ದಪ್ಪ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಳೆದ 32 ವರ್ಷದಿಂದ ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾರಂಭವಾಗಿ ಆಚರಿಸುತ್ತಿರುವ ನುಡಿ ಸಂಭ್ರಮವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾಗತಿಕ ಮನ್ನಣೆ ಪಡೆದಿರುವ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ವೈಭವ 33ನೇ ನುಡಿ ಸಂಭ್ರಮದಲ್ಲಿ ವಿಜೃಂಭಿಸಲಿದೆ. ಇದಕ್ಕಾಗಿ 350 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಅಕ್ಕಿಆಲೂರಿಗೆ ಆಗಮಿಸಲಿದ್ದಾರೆ. ಮುತ್ತಿನಕಂತಿಮಠದ ಆವರಣದ ಬದಲಾಗಿ ಈ ಬಾರಿ ಮೂರು ದಿನ ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ನರಸಿಂಗ್ರಾವ್ ದೇಸಾಯಿ ಕಾಲೇಜು ಮೈದಾನದಲ್ಲಿ ನುಡಿ ಸಂಭ್ರಮ ಆಯೋಜಿಸಲಾಗಿದೆ ಎಂದರು.
ಫೆ. 14ರಂದು ಮಧ್ಯಾಹ್ನ 2ಕ್ಕೆ ದುಂಡಿ ಬಸವೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಹೊರಟು ದೇಸಾಯಿ ಕಾಲೇಜು ಮೈದಾನ ತಲುಪಲಿದೆ. 14 ಮತ್ತು 15ರಂದು ನಾಡಿನ ಸಾಹಿತಿಗಳು, ಕಲಾವಿದರು ಮತ್ತು ಸ್ಥಳೀಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ಜರುಗಲಿದೆ. 16ರಂದು ಆಳ್ವಾಸ್ ವಿದ್ಯಾರ್ಥಿಗಳಿಗೆ ಮಾತ್ರ ವೇದಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಷಣ್ಮುಖಪ್ಪ ಮುಚ್ಚಂಡಿ ಹೇಳಿದರು.ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಸಾವಿರಾರು ನಾಡಾಭಿಮಾನಿಗಳು ಸೇರುವ ನಿರೀಕ್ಷೆ ಇದೆ. ಪ್ರತ್ಯೇಕ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದರು.
ಬಿಇಒ ವಿ.ವಿ. ಸಾಲಿಮಠ, ಮಖಬುಲ್ ರುಸ್ತುಂಖಾನವರ, ಮನೋಜ ದೇಸಾಯಿ ಸಹಕಾರ ನೀಡುವ ಭರವಸೆ ನೀಡಿದರು. ಉದಯಕುಮಾರ ವಿರುಪ್ಪಣ್ಣವರ, ಸದಾನಂದ ಉಡುಪ, ಎಸ್.ಎಸ್. ಕಲ್ಲೇರ, ಕಿರಣ ರಾಜೂರ, ವಸಂತ ಚಿಕ್ಕಣ್ಣನವರ, ಜ್ಯೋತಿ ಹರ್ತಿ ಹಿರೇಮಠ ಇದ್ದರು.