ಅಕ್ಕಿಆಲೂರ ಕನ್ನಡ ನುಡಿ ಸಂಭ್ರಮ: ನಾಡಿನ ಗತವೈಭವ ಸಾರಿದ ಅದ್ದೂರಿ ಶೋಭಾಯಾತ್ರೆ

Shobhayatra at akkialur
Published on

ಅಕ್ಕಿಆಲೂರ: ಕನ್ನಡ ನುಡಿ ಸಂಭ್ರಮದ ಪ್ರಯುಕ್ತ ಸ್ಥಳೀಯ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾಸಂಘದ ವತಿಯಿಂದ ಗುರುವಾರದಿಂದ ಆರಂಭವಾಗಿರುವ ನಾಡಿನ ಗತವೈಭವ ಸಾರುವ ಭುವನೇಶ್ವರಿ ದೇವಿಯ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು.

ಪಟ್ಟಣದ ವರಸಿದ್ಧಿ ಆಂಜನೇಯ ದೇವಸ್ಥಾನದಿಂದ ಶುರುವಾರ ಶೋಭಾಯಾತ್ರೆಗೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಸಿದ್ರಾಮಪ್ಪ ವಿರುಪಣ್ಣವರ ಚಾಲನೆ ನೀಡಿದರು. ನಾಡು-ನುಡಿ-ಸಂಸ್ಕೃತಿ ಸಾರುವ ಗ್ರಾಮೀಣ ಸೊಗಡಿನ ಕಲಾತಂಡಗಳು, ಪೌರಾಣಿಕ ಪಾತ್ರಗಳು, ಜನಪದ ಸಿರಿ, ಜಗಜ್ಯೋತಿ ಬಸವಣ್ಣನವರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಅಕ್ಕಮಹಾದೇವಿ ರೂಪಕ, ಮರಗೋಲು ಪ್ರದರ್ಶನ, ಸಮ್ಮಾಳ ನೃತ್ಯ, ದಶವತಾರಿ ದೇವಿ, ವಿಜಯನಗರದ ಕೃಷ್ಣದೇವರಾಯರ ರೂಪಕ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ತಬ್ಧಚಿತ್ರಗಳು, ತಾಯಿ ಭುವನೇಶ್ವರಿ ದೇವಿಯ ರೂಪಕ, ಜನಪದ ಶೈಲಿಯ ಲಂಬಾಣಿ ಉಡುಗೆಯ ಮೆರವಣಿಗೆ ನಡೆಯಿತು. 40ಕ್ಕೂ ಅಧಿಕ ತಂಡಗಳು ನಾಡಿನ ಇತಿಹಾಸದ ಗತವೈಭವ ಮೆರವಣಿಗೆಯಲ್ಲಿ ಪ್ರಸ್ತತಗೊಂಡಿತು. ಕನ್ನಡ ನಾಡು ನುಡಿ ಜಾಗೃತಿಯ ಕುರಿತು ಘೊಷಣೆಗಳು, ಕನ್ನಡಗೀತೆಗಳು ಮೆರವಣಿಗೆಯ ಉದ್ದಗಲಕ್ಕೂ ಕೇಳಿಬಂದವು.

ಶೋಭಾಯಾತ್ರೆ ಸಾಗುತ್ತಿದ್ದ ಮಾರ್ಗದಲ್ಲಿ ಜನತೆ, ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು. ಎಲ್ಲ ಬಡಾವಣೆಗಳಲ್ಲೂ ಕನ್ನಡ ಧ್ವಜ, ಕಮಾನುಗಳು ರಾರಾಜಿಸಿದವು. ನಂತರ ಪ್ರಧಾನ ವೇದಿಕೆ ಮುತ್ತಿನಕಂತಿಮಠದ ಆವರಣದಲ್ಲಿ ಶೋಭಾಯಾತ್ರೆ ಸಂಪನ್ನಗೊಂಡಿತು. ಇದಕ್ಕೂ ಮುನ್ನ ಸಮಾರಂಭ ನಡೆಯುವ ಮುತ್ತಿನಕಂತಿಮಠದ ಆವರಣದಲ್ಲಿ ಕಸಾಪ ತಾಲೂಕಾಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ನಾಡ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಬಸವರಾಜ ಕೋರಿ, ಆದಿತ್ಯ ಸಾಲಿಮಠ, ಶ್ರೀಧರ ಪರಶಿಕ್ಯಾತಿ, ಅಮರ ಬೆಲ್ಲದ, ಪ್ರಕಾಶ ದುರ್ಗದ, ಯಮನಪ್ಪ ಬಾಗಲಕೋಟೆ, ವಿನಾಯಕ ಕಲ್ಲಾಪುರ, ಶಿಕ್ಷಕರಾದ ಶೋಭಾ ಪಾಟೀಲ, ಮಂಜುನಾಥ ಹಾವೇರಿ, ಬಸವರಾಜ ನೆಲ್ಲಿಕೊಪ್ಪ, ಸಿದ್ದು ಕೊಂಡಜ್ಜಿ, ವಿರೂಪಣ್ಣ ತಳವಾರ, ನಂದಿನಿ ಕೆ.ಬಿ. ಇತರರಿದ್ದರು.

ನುಡಿಸಂಭ್ರಮದಲ್ಲಿಂದು

ಫೆ. 2ರಂದು ಸಂಜೆ 6 ಗಂಟೆಗೆ ನಡೆಯುವ ಜನಪದ ಸಂಭ್ರಮದ ಸಾನ್ನಿಧ್ಯವನ್ನು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ವಹಿಸುವರು. ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವಾ ಉದ್ಘಾಟಿಸುವರು. ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಅಧ್ಯಕ್ಷತೆ ವಹಿಸುವರು. ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಅವರಿಗೆ ಬಸವ ಚೇತನ ಪುರಸ್ಕಾರ ನೀಡಲಾಗುವುದು. ಯುವ ವಾಗ್ಮಿ ನಾರಾಯಣ ಭಾಗ್ವತ ವಿಶೇಷ ನುಡಿಯನ್ನಾಡುವರು. ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜಶೇಖರ ಕಟ್ಟೆಗೌಡ್ರ, ಕಾಂತೇಶ ಈಶ್ವರಪ್ಪ, ಇತರರು ಪಾಲ್ಗೊಳ್ಳುವರು. ನಂತರ ಅದ್ದೂರಿ ಸಾಂಸ್ಕೃತಿಕ ವೈಭವ ನೆರವೇರಲಿದೆ.

ಜಿಲ್ಲೆಯ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಕ್ಕಿಆಲೂರ ಅಭಿವೃದ್ಧಿ ಜತೆಗೆ ಸಾಂಸ್ಕೃತಿಕವಾಗಿ ನಾಡಿನಲ್ಲಿ ಗುರುತಿಸಿಕೊಂಡಿದೆ. ನುಡಿ ಸಂಭ್ರಮ ನಮ್ಮೂರಿನ ಹೆಮ್ಮೆಯ ಸಮಾರಂಭ. ಪಟ್ಟಣದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿ, ಅಕ್ಕಿಆಲೂರ ಧನಾತ್ಮಕವಾಗಿ ಗುರುತಿಸಿಕೊಳ್ಳಲು ಸಮಾರಂಭ ಅನುಕೂಲವಾಗಿದೆ. | ಮಕ್ಬುಲ್ ಅಹ್ಮದ್ ರುಸ್ತುಂಖಾನವರ, ಗ್ರಾಪಂ ಅಧ್ಯಕ್ಷ ಅಕ್ಕಿಆಲೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net