

ಅಕ್ಕಿಆಲೂರ: ಪಟ್ಟಣದ ಐತಿಹಾಸಿಕ ಈಶ್ವರ ಕೆರೆಯ ತಡೆಗೋಡೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಕೆರೆಯಲ್ಲಿ ಭರ್ತಿಯಾಗಿರುವ ನೀರು ಸೋರಿಕೆಯಾಗುತ್ತಿದೆ.
ಅಕ್ಕಿಆಲೂರ ಹಾಗೂ ಸುತ್ತಲಿನ ಇನಾಂಯಲ್ಲಾಪುರ, ಕಲ್ಲಾಪುರ, ಯತ್ತಿನಹಳ್ಳಿ, ಮಲಗುಂದ ಗ್ರಾಮಗಳಿಗೆ ವರ್ಷಪೂರ್ತಿ ನೀರಾವರಿಯ ಮೂಲವಾಗಿರುವ ಸುಮಾರು 160 ಎಕರೆ ವಿಸ್ತೀರ್ಣದ ಈಶ್ವರ ಕೆರೆಗೆ ಕಲ್ಲಾಪುರ ರಸ್ತೆಯಲ್ಲಿ ತಡೆಗೋಡೆ ನಿರ್ವಿುಸಲಾಗಿದೆ. ಕೆರೆ ಭರ್ತಿಯಾದರೆ ಕಲ್ಲಾಪುರ ರಸ್ತೆಯ ಪಕ್ಕ ಇರುವ ತಡೆಗೋಡೆ ಮೇಲೆ ನೀರು ಹರಿಯುತ್ತದೆ. ಈ ಬಾರಿ ಉತ್ತಮ ಮಳೆಯಿಂದ ಕೆರೆ ತುಂಬಿ, ಕೋಡಿ ಬಿದ್ದಿತ್ತು. ಸದ್ಯ ತಡೆಗೋಡೆ ಮೇಲೆ ನೀರು ಹರಿಯುವುದು ಕಡಿಮೆಯಾಗಿದೆ. ಆದರೆ, ತಡೆಗೋಡೆ ಶಿಥಿಲಗೊಂಡು ಮೂಡಿರುವ ರಂಧ್ರಗಳ ಮೂಲಕ ನೀರು ಧಾರಾಕಾರವಾಗಿ ಸಾಗುತ್ತಿದೆ. ಗೋಡೆಗೆ ದೊಡ್ಡ ಹಾನಿಯಾದರೆ ನೀರು ಖಾಲಿಯಾಗುವ ಆತಂಕವಿದೆ. ಗೋಡೆ ಒಡೆಯದಿದ್ದರೂ ರಂಧ್ರದ ಮೂಲಕ ನೀರು ಸಾಗಿ, ಕಲ್ಲಾಪುರ, ಯತ್ತಿನಹಳ್ಳಿಯ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ಮಲಗುಂದ ಗ್ರಾಮದ ಬಳಿ ಹರಿದಿರುವ ವರದಾ ನದಿ ಸೇರಲಿದೆ.
ಕೆರೆಯಲ್ಲಿ ಹೆಚ್ಚುವರಿ ನೀರು ಸಂಗ್ರಹವಾದಾಗ, ರಭಸವಾಗಿ ಗೋಡೆ ಮೇಲೆ ನೀರು ಹರಿಯುವುದರಿಂದ ಸಹಜವಾಗಿ ಗೋಡೆಗೆ ಸಾಕಷ್ಟು ಹಾನಿಯಾಗಿದೆ. ಒಂದು ವೇಳೆ ಗೋಡೆ ಒಡೆದರೆ, ಕೆರೆಯ ಕೆಳಗಡೆ ಇರುವ ಅಕ್ಕಿಆಲೂರ ಹಾಗೂ ಕಲ್ಲಾಪುರ ಭಾಗದ ಜಮೀನಿನಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಲಿದೆ.
ಈಶ್ವರ ಕೆರೆಯ ನೀರು ನಂಬಿ ಸಾವಿರಾರು ರೈತರು, ನೂರಾರು ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಯೋಗ್ಯ ವಾತಾವರಣದ ಹಿನ್ನೆಲೆಯಲ್ಲಿ ಬಹುತೇಕರು ಅಡಕೆ ಬೆಳೆದಿದ್ದಾರೆ. ಕೆರೆಯು ಖಾಲಿಯಾದಾಗ ಸುತ್ತಲಿನ ಅಡಕೆ ಮರಗಳು ಒಣಗಿ, ರೈತರು ಸಂಕಷ್ಟ ಅನುಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಕೆರೆಯಲ್ಲಿನ ನೀರು ಅನುಪಯುಕ್ತವಾಗಿ ಹರಿಯುವುದನ್ನು ತಪ್ಪಿಸಿ, ಮುಂದಿನ ಮಳೆಗಾಲದವರೆಗೂ ಕಾಯ್ದುಕೊಂಡು ಹೋಗಬೇಕಾಗಿದೆ. ಇದಕ್ಕಾಗಿ ಶಿಥಿಲಗೊಂಡ ತಡೆಗೋಡೆ ದುರಸ್ತಿ ಮಾಡಿಸಿ, ನೀರನ್ನು ತಡೆಯಬೇಕು ಎಂಬುದು ರೈತರು ಆಗ್ರಹವಾಗಿದೆ.
ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈಶ್ವರ ಕೆರೆಯ ಕೋಡಿ ಬೀಳುವ ತಡೆಗೋಡೆ ಶಿಥಿಲಗೊಂಡಿದೆ. ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ತಿಳಿಸಿದರೆ ಹಣವಿಲ್ಲ ಎಂಬ ಉತ್ತರ ಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದರೆ, ಅವರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆರೆಯಲ್ಲಿ ವರ್ಷಪೂರ್ತಿ ನೀರು ಇದ್ದರೆ ಮಾತ್ರ ತೋಟಗಳಿಗೆ ಅನುಕೂಲವಾಗುತ್ತದೆ. ಸೂಕ್ತ ಕ್ರಮ ಕಯಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು. | ಸಿದ್ದಣ್ಣ ಸಿಂಧೂರ, ತೋಟಗಾರಿಕೆ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಅಕ್ಕಿಆಲೂರ ನೀರಾವರಿ ಇಲಾಖೆಯಲ್ಲಿ ಹಣದ ಕೊರತೆ ಇದೆ. ಅಕ್ಕಿಆಲೂರ ಈಶ್ವರ ಕೆರೆ ಪರಿಶೀಲನೆ ಮಾಡಲಾಗುವುದು. ನೀರು ಕಡಿಮೆಯಾದ ನಂತರ ಒಳ ಭಾಗದಲ್ಲಿ ರಂಧ್ರ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. | ಪ್ರಲ್ಹಾದ್ ಶೆಟ್ಟಿ, ಎಇಇ ನೀರಾವರಿ ಇಲಾಖೆ ಹಾನಗಲ್ಲ