

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಶ್ರೀಕೃಷ್ಣನ ಮುಂದಿನ ಪರ್ಯಾಯ ಸೇವೆಯು ಅಷ್ಟ ಮಠಗಳಲ್ಲೊಂದಾದ ಶೀರೂರು ಮಠಕ್ಕೆ ಒದಗಿಬಂದಿದ್ದು, ನಮ್ಮ ಪ್ರಥಮ ಪರ್ಯಾದಲ್ಲಿ ಅನ್ನದಾನಕ್ಕೆ ಪ್ರಥಮಾದ್ಯತೆ ನೀಡಲಾಗಿದೆ. ತನ್ನಿಮಿತ್ತ ಮಾ.6ರಂದು ಬೆಳಗ್ಗೆ 11:10ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀಮಠದಲ್ಲಿ ಅಕ್ಕಿ ಮುಹೂರ್ತ ನಡೆಯಲಿದೆ ಎಂದು ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರು ಮಾಹಿತಿ ನೀಡಿದರು.
ಶೀರೂರು ಮಠದ ದಿವಾನ ಉದಯಕುಮಾರ ಸರಳತ್ತಾಯ ಮಾತನಾಡಿ, ಈಗಾಗಲೇ ಕಳೆದ ಡಿಸೆಂಬರ್ ತಿಂಗಳಲ್ಲಿ ಶೀರೂರು ಪರ್ಯಾಯದ ಪ್ರಥಮ ಕಾರ್ಯವಾಗಿ ಬಾಳೆ ಮುಹೂರ್ತ ನಡೆದಿದೆ. ಎಲ್ಲ ಮುಹೂರ್ತಗಳಿಗಿಂತಲೂ ಅಕ್ಕಿ ಮುಹೂರ್ತ ಅತ್ಯಂತ ಮಹತ್ವದ ಕಾರ್ಯವಾಗಿದೆ. ಮಾ.6ರಂದು ಬೆಳಗ್ಗೆ 6 ಗಂಟೆಗೆ ಎಲ್ಲ ಮಠಗಳಿಗೆ ತೆರಳಿ ಶ್ರೀಗಳಿಗೆ ಆಹ್ವಾನ ನಡೆಯಲಿದೆ. ಎಲ್ಲ ಶ್ರೀಗಳು ತಮ್ಮ ಪಟ್ಟದ ದೇವರುಗಳೊಂದಿಗೆ ಶೀರೂರು ಮಠಕ್ಕೆ ಆಗಮಿಸಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಶೀರೂರು ಮಠದ ಪಟ್ಟದ ದೇವರಾದ ವಿಠ್ಠಲ ದೇವರಿಗೆ ಪೂಜೆ, ಪ್ರಾರ್ಥನೆ ನಡೆಯಲಿದೆ ಎಂದರು.
ಬೆಳಗ್ಗೆ 9:30ಕ್ಕೆ ಶೀರೂರು ಮಠದಿಂದ ಮೆರವಣಿಗೆ ಹೊರಟು ರಥಬೀದಿಯಲ್ಲಿರುವ ಚಂದ್ರಮೌಳೇಶ್ವರ, ಅನಂತೇಶ್ವರ ದೇಗುಲ, ಶ್ರೀಕೃಷ್ಣ ಮಠ, ಮುಖ್ಯಪ್ರಾಣ ಹಾಗೂ ಗರುಡ ದೇವರಿಗೆ ಪ್ರದಕ್ಷಿಣಾಕಾರವಾಗಿ ಪ್ರಾರ್ಥನೆ ನಡೆಯಲಿದೆ. ನಂತರ ಸಂಸ್ಕೃತ ಕಾಲೇಜಿನ ಬಳಿ ಸಂಗ್ರಹಿಸಿರುವ ಅಕ್ಕಿ ಮುಡಿಯನ್ನು ಸ್ವರ್ಣ ಪಲ್ಲಕಿಯಲ್ಲಿಟ್ಟು ಮತ್ತೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿ 11:10ಕ್ಕೆ ಅಕ್ಕಿ ಮುಹೂರ್ತ ನಡೆಯಲಿದೆ ಎಂದು ತಿಳಿಸಿದರು.
ಶ್ರೀಕೃಷ್ಣನ ಸ್ಪರ್ಷ ಪೂಜೆಗೆ ಕೇವಲ ಯತಿಗಳಿಗೆ ಮಾತ್ರ ಅವಕಾಶ ಇದೆ. ಹೀಗಾಗಿ ಭಕ್ತರಿಗೂ ಕೃಷ್ಣನ ಸೇವೆ ಸಲ್ಲಿಸಲು ಅವಕಾಶ ಲಭಿಸುವಂತಾಗಲು ಮಧ್ವಾಚಾರ್ಯರು ಬಾಳೆ ಮುಹೂರ್ತ ಹಾಗೂ ಅಕ್ಕಿ ಮುಹೂರ್ತಗಳಲ್ಲಿ ಭಕ್ತರು ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ. ದೇವತಾ ಕಾರ್ಯ ಹಾಗೂ ಪಿತೃ ಕಾರ್ಯಗಳಲ್ಲಿ ಅನ್ನದಾನಕ್ಕೆ ವಿಶೇಷ ಸ್ಥಾನ ಇರುವುದರಿಂದ ಅಕ್ಕಿ ನೀಡುವ ಮೂಲಕ ಅನ್ನದಾನಕ್ಕೆ ಸಹಕರಿಸಬಹುದು. ಸಣ್ಣ ಅಕ್ಕಿ ಮುಡಿಗೆ ಒಂದು ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ತನ್ಮೂಲಕ ಕೃಷ್ಣನ ಸೇವೆಯಲ್ಲಿ ಪಾಲ್ಗೊಳ್ಳಬೇಕು. | ವೇದವರ್ಧನ ತೀರ್ಥ ಶ್ರೀಪಾದರು. ಶೀರೂರು ಮಠ ಪರ್ಯಾಯ ಉತ್ಸವವೇ ಉಡುಪಿಗೆ ನಾಡಹಬ್ಬವಾಗಿದೆ. ಅದಕ್ಕೆ ಸಂಬಂಧಿಸಿದ ಅಕ್ಕಿ ಮುಹೂರ್ತ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಅಲ್ಲದೆ, ಶ್ರೀಕೃಷ್ಣನ ಸೇವೆಗೆ ಭಕ್ತರಿಗೆ ಒದಗಿಬರುವ ಪುಣ್ಯಕರ ದಿನವಾಗಿದೆ. ಅಕ್ಕಿ ಮುಹೂರ್ತದಲ್ಲಿ ಉಡುಪಿಯ ಜನತೆ ಪಾಲ್ಗೊಳ್ಳಬೇಕು ಎಂದು ಶೀರೂರು ಮಠದ ವತಿಯಿಂದ ಹಾಗೂ ಶಾಸಕನ ನೆಲೆಯಿಂದ ಆಹ್ವಾನಿಸುತ್ತೇನೆ. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ