ವೈರಾಗ್ಯದ ಸಾಕ್ಷಿಮೂರ್ತಿ ಅಕ್ಕಮಹಾದೇವಿ

Akkamahadevi, the witness of renunciation
ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಪೂಜೆ ಸಲ್ಲಿಸಿದರು. ಆರ್.ಎಸ್. ಸಾತಿಹಾಳ, ಸದಾಶಿವ ಕುಂಬಾರ, ಗುರುಸಿದ್ದಪ್ಪಾ ಚನಾಳ, ಬಸವರಾಜ ತೆಗ್ಗಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಅರಸೊತ್ತಿಗೆಯ ವಿಲಾಸಿ ಜೀವನ ದಿಕ್ಕರಿಸಿ, ಆಧ್ಯಾತ್ಮಿಕ ಸೋಪಾನ ತುಳಿದ ವಚನಗಾರ್ತಿ ಅಕ್ಕಮಹಾದೇವಿ ಇಂದಿಗೂ ಜ್ಞಾನ ಮತ್ತು ವೈರಾಗ್ಯದ ಸಾಕ್ಷೀ ಮೂರ್ತಿಯಾಗಿದ್ದಾರೆ ಎಂದು ತಹಸೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೊಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಿಸರ್ಗದ ಮೂಲ ಸೆಲೆ ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ವಚನಗಳಲ್ಲಿ ನಿಸರ್ಗದ ಪ್ರಾಣಿ-ಪಕ್ಷಿಗಳನ್ನು ದೃಷ್ಟಾಂತ, ಉಪಮಾನ, ಉಪಮೇಯ, ಅಲಂಕಾರಗಳಾಗಿ ಬಳಕೆ ಮಾಡಿದ್ದಾರೆ. ಆಧ್ಯಾತ್ಮಿಕ ಭಾವಗೀತೆಗಳನ್ನು ವಚನಗಳಲ್ಲಿ ಅಳವಡಿಸುವ ಮೂಲಕ ಅದ್ಭುತ ಅನುಭಾವಿ ದಾರ್ಶನಿಕೆಯಾಗಿ ರೂಪುಗೊಂಡರು. ಸುಂದರತೆಯ ಸಾಕಾರವೇ ಆಗಿದ್ದ ಅಕ್ಕಮಹಾದೇವಿ ಸರಳತೆ, ಸಹಜತೆ, ಕರುಣೆ ಮೊದಲಾದ ಗುಣಗಳ ಧಾರಣಮಾಡಿ ಆಧ್ಯಾತ್ಮಿಕತೆಯ ಮೇರುಪಂಕ್ತಿಗೇರಿದ ಮೊಟ್ಟಮೊದಲ ಕನ್ನಡ ವಚನಗಾರ್ತಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದರು.

ಬಣಜಿಗ ಸಮಾಜದ ರಬಕವಿ ಘಟಕದ ಅಧ್ಯಕ್ಷ ಗಿರೀಶ ಮುತ್ತೂರ ಮಾತನಾಡಿ, ಬಸವಾದಿ ಶರಣರ ಬದುಕೇ ನಮಗೆ ಸಂದೇಶ. ಅವರಲ್ಲಿನ ಕಾಯಕನಿಷ್ಠೆ, ದಾಸೋಹ ಪ್ರೇಮ ಮತ್ತು ಸಾಮಾಜಿಕ ಸಮಾನತೆ, ಸಾಮರಸ್ಯಯುತ ಜೀವನಕ್ರಮ ಅನುಕರಣಯೋಗ್ಯ ಎಂದರು.

ರಬಕವಿ-ಬನಹಟ್ಟಿ ಬಣಜಿಗ ಸಮಾಜದ ಮುಖಂಡರಾದ ಗುರುಸಿದ್ದಪ್ಪ ಚನಾಳ, ಚಂದ್ರಶೇಖರ ಹುಲಗಬಾಳಿ, ಬಸವರಾಜ ತೆಗ್ಗಿ, ಬಸವರಾಜ ಕುಂಚನೂರ, ಸೋಮಶೇಖರ ಕೊಟ್ರಶೆಟ್ಟಿ, ಈಶ್ವರ ಜಿಗಜಿನ್ನಿ, ಪ್ರಕಾಶ ಟೆಂಗಿನಕಾಯಿ, ವಿಜಯಕುಮಾರ ನಾಶಿ, ಶ್ರೀಶೈಲ ಪಾನಶೆಟ್ಟರ, ಉದಯಕುಮಾರ ಜಿಗಜಿನ್ನಿ, ಮಹಾಶಾಂತ ಶೆಟ್ಟಿ, ಗಜಾನನ ತೆಗ್ಗಿ, ವಿಜಯಕುಮಾರ ಹಲಕುರ್ಕಿ, ಮಲ್ಲಿಕಾರ್ಜುನ ಗಡೆನ್ನವರ, ಶಿವಾನಂದ ಮಹಾಬಳಶೆಟ್ಟಿ, ಉಪತಹಸೀಲ್ದಾರ್ ಆರ್.ಎಸ್. ಸಾತಿಹಾಳ, ಗ್ರಾಮ ಲೆಕ್ಕಾಧಿಕಾರಿ ಸದಾಶಿವ ಕುಂಬಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net