ಅಕ್ಕಮಹಾದೇವಿ ಪರಮ ವೈರಾಗ್ಯ ನಿಧಿ

Akkamahadevi Parama Vairagya Nidhi
Published on

ಲಕ್ಷ್ಮೇಶ್ವರ: ಮಹಾನ್ ಶಿವಶರಣೆ ಅಕ್ಕಮಹಾದೇವಿಯವರ ಆಧ್ಯಾತ್ಮಿಕ ವಚನಗಳು, ಜೀವನ ಶೈಲಿ, ಬದುಕಿನ ಅನುಭವದ ಅಮೃತ ನುಡಿಗಳು ಬದುಕಿಗೆ ದಾರಿದೀಪವಾಗಿವೆ ಎಂದು ಹಿರಿಯ ಸಾಹಿತಿ ಲಲಿತಾ ಕೆರಿಮನಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕಮಹಾದೇವಿ ವಚನಗಳ ಅಂಶಗಳು ಸಾರ್ವಕಾಲಿಕ ಸತ್ಯ ಹಾಗೂ ಕನ್ನಡ ಸಾರಸ್ವತ ಲೋಕದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಮಹತ್ತರ ಕೊಡುಗೆಗಳಾಗಿವೆ. ಸಮಾನತೆ, ಸ್ತ್ರೀ ಕುಲ ಏಳಿಗೆಗಾಗಿ ಶ್ರಮಿಸಿದ ಅಕ್ಕಮಹಾದೇವಿ ಪರಮ ವೈರಾಗ್ಯನಿಧಿಯಾಗಿದ್ದರು. ಅಣ್ಣ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು ಅನೇಕ ಶರಣ ಶ್ರೇಷ್ಠರ ಸಮಕಾಲೀನಳಾಗಿ, ಅವರೆಲ್ಲರ ಸಮಕ್ಕೆ ನಿಂತು ಶ್ರೇಷ್ಠ ವಚನಗಳನ್ನು ರಚಿಸಿದ ಕನ್ನಡದ ಪ್ರಥಮ ಕವಯತ್ರಿಯಾಗಿ ಅಕ್ಕಮಹಾದೇವಿಯರ ಹೆಸರು ಸದಾ ಚಿರಸ್ಥಾಯಿಯಾಗಿದೆ. ಇಂತಹ ಶ್ರೇಷ್ಠ ಮಹಿಳೆಯನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದರು.

ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನತೆ ಎಲ್ಲ ಕ್ಷೇತ್ರಗಳಲ್ಲಿ ಸಿಗಬೇಕು ಎಂದು 12ನೇ ಶತಮಾನದಲ್ಲಿಯೇ ಅಕ್ಕ ಗಟ್ಟಿಯಾಗಿ ಬಿಂಬಿಸುವ ಕಾರ್ಯ ಮಾಡಿದ್ದಾರೆ. ಅಕ್ಕಮಹಾದೇವಿ ಮಹಿಳೆಯರ ಬದುಕಿಗೆ ಆದರ್ಶವಾಗಿದ್ದಾರೆ ಎಂದರು.

ಮಹಿಳೆಯರಿಂದ ತೊಟ್ಟಿಲು ಪೂಜೆ, ನಾಮಕರಣ ಕಾರ್ಯ ಮಾಡಿ ಅಕ್ಕಮಹಾದೇವಿಯ ವಚನಗಳನ್ನು ಸ್ತುತಿಸಲಾಯಿತು.

ಡಾ. ಶಕುಂತಲಾ ವಡಕಣ್ಣವರ ಉಪನ್ಯಾಸ ನೀಡಿದರು. ವೇದಿಕೆಯ ಹಿರಿಯ ಸದಸ್ಯರಾದ ಪ್ರತಿಮಾ ಮಹಾಜನಶೆಟ್ಟರ, ಜಯಶ್ರೀ ಮತ್ತಿಕಟ್ಟಿ, ಲತಾ ತಟ್ಟಿ, ಅಶ್ವಿನಿ ಅಂಕಲಕೋಟಿ, ನೀಲಾ ಕುಂಬಿ, ನಿರ್ಮಲಾ ವಡಕಣ್ಣವರ, ಅನ್ನಪೂರ್ಣಾ ಓದುನವರ, ಕಾಂಚನಾ ಹಸರೆಡ್ಡಿ, , ಮೇಘಾ ಸೌದತ್ತಿ, ಅನ್ನಕ್ಕ ಯಾಳಗಿ, ಗೌರಮ್ಮ ಯಳಮಲಿ, ವಿನೂತಾ ಅರಳಿ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net