

ಹುಬ್ಬಳ್ಳಿ: ಮಹಾಶಿವಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ ಅಕ್ಕನ ಬಳಗದ 87ನೇ ವಾರ್ಷಿಕೋತ್ಸವ ಅಂಗವಾಗಿ ಏಪ್ರಿಲ್ 7ರಿಂದ ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಏ. 7ರಂದು ಮಧ್ಯಾಹ್ನ 3ಕ್ಕೆ ಚುಕ್ಕಿ ರಂಗೋಲಿ ಸ್ಪರ್ಧೆ, ಸಂಜೆ 5ಕ್ಕೆ ಅಕ್ಕ ಮಹಾದೇವಿ ವಚನ ಸ್ಪರ್ಧೆ ಏರ್ಪಡಿಸಲಾಗಿದೆ. ಏ. 8ರಂದು ಸಂಜೆ 4.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ಶಾಸಕ ಪ್ರಸಾದ ಅಬ್ಬಯ್ಯ, ಆಕ್ಸಫರ್ಡ್ ಕಾಲೇಜು ಚೇರ್ಮನ್ ವಸಂತ ಹೊರಟ್ಟಿ, ಆನಂದ ಯಳಮಲಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಿಕಟಪೂರ್ವ ಅಧ್ಯಕ್ಷೆ ಗೀತಾ ಮುಳ್ಳಳ್ಳಿ ಅಧ್ಯಕ್ಷತೆ ವಹಿಸುವರು ಎಂದು ಅಧ್ಯಕ್ಷೆ ನಿರ್ಮಲಾ ಅಂಗಡಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಚನಾಮೃತ ನೃತ್ಯ ಪ್ರದರ್ಶನ ನಡೆಯಲಿದೆ. ಏ. 12ರವರೆಗೆ ನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಏ. 12ರಂದು ಬೆಳಗ್ಗೆ 10.30ಕ್ಕೆ ಮೂರುಸಾವಿರ ಮಠದ ಶ್ರೀ ಗುರುಸಿದ್ದೇಶ್ವರ ಕರ್ತೃ ಗದ್ದುಗೆಗೆ ಬಳಗದ ವತಿಯಿಂದ ಅಭಿಷೇಕ ಹಾಗೂ ಮಹಾದೇವಿ ಅಕ್ಕನಿಗೆ ಪೂಜೆ, ರುದ್ರಪಠಣ ಹಾಗೂ ತೊಟ್ಟಿಲೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.