ಅಕ್ಕಮಹಾದೇವಿ ಸ್ತ್ರೀಕುಲದ ಮಹಾಜ್ಯೋತಿ: ಕಾವೇರಿ ಪ್ರಕಾಶ್

akkamahadevi
Published on

ಕೂಡಿಗೆ: ಹನ್ನೆರಡನೇ ಶತಮಾನದ ಮಹಾಶಿವಶರಣೆ ಅಕ್ಕಮಹಾದೇವಿ ಇಡೀ ಮನುಕುಲದ ಮಹಾಬೆಳಕು. ಮಹಿಳೆಯರ ಪಾಲಿಗೆ ಸದಾ ಹಿರಿಯಕ್ಕ ಎಂದು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಾವೇರಿ ಪ್ರಕಾಶ್ ಹೇಳಿದರು.

ಕುಶಾಲನಗರದ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದ ಅವರು, ಮಹಾದೇವಿಯ ಸಹಜ ಸೌಂದರ್ಯಕ್ಕೆ ಮರುಳಾದ ಕೌಶಿಕ ಮಹಾರಾಜ ಮಹಾದೇವಿಯನ್ನು ವಿವಾಹ ವಾಗಲು ಪರಿತಪಿಸಿದಾಗ, ಮಹಾದೇವಿ ಒಡ್ಡಿದ್ದ ಷರತ್ತುಗಳನ್ನು ಧಿಕ್ಕರಿಸಿ ಲೈಂಗಿಕ ಕ್ರೌರ್ಯ ಮೆರೆಯಲು ಮುಂದಾದ ಕೌಶಿಕ ರಾಜನ ವಿರುದ್ಧ ಬಂಡೆದ್ದು ದಿಂಗಂಬರಳಾಗಿಯೇ ಕಲ್ಯಾಣಕ್ಕೆ ಮಹಾದೇವಿ ಹೆಜ್ಜೆ ಹಾಕಿದಳು. ತನ್ನ ಇಷ್ಟಾರ್ಥ ದೈವ ಶ್ರೀಚೆನ್ನಮಲ್ಲಿಕಾರ್ಜುನ ನನ್ನು ನೆನೆಯುತ್ತಾ ಇಡೀ ಜೀವನ ಕಳೆದು ಅಲ್ಲಮ ಪ್ರಭುಗಳಿಂದ ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿಯಾಗಿ ರೂಪುಗೊಂಡ ಬಗೆಯನ್ನು ಡಾ.ಕಾವೇರಿ ವಿಶ್ಲೇಷಿಸಿದರು.

ಹುಟ್ಟು ಮತ್ತು ಮುಟ್ಟು ವಿಷಯದಲ್ಲಿ ಮೈಲಿಗೆಯ ಸೂತಕವನ್ನು ಆಚರಿಸುತ್ತಾ ಬಂದ ಕೆಟ್ಟ ಪರಂಪರೆಯಿಂದಾಗಿ ಮಹಿಳೆ ಮೈಲಿಗೆಯ ಜೀವಿಯಾಗಬೇಕಾಯಿತು. ಅಂದು ಮಹಿಳೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕವಾದ ಯಾವ ಬಗೆಯ ಸ್ವಾತಂತ್ರ್ಯವೂ ಇಲ್ಲದೇ ಶೋಷಣೆಗೊಳಗಾದ ಹೆಣ್ಣಿನ ನೈಜ ಧ್ವನಿಯಾದ ಅಕ್ಕಾಮಹಾದೇವಿ ಸ್ತ್ರೀ ಕುಲವನ್ನು ಬೆಳಗಿದ ಮಹಾದೀಪ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳು ಇತಿಹಾಸವನ್ನು ಅರಿತು, ಅಧ್ಯಯನ ಮಾಡುವ ಮೂಲಕ ನಮ್ಮ ನಾಡಿನ ಭವ್ಯ ಪರಂಪರೆಯನ್ನು ಗೌರವಿಸಬೇಕು. ಹಾಗಾಗಿ ಮಾನವೀಯತೆಯ ಮೌಲ್ಯಗಳನ್ನು ಅರಿತು ನಡೆಯಬೇಕೆಂದು ಈ ಸಂದರ್ಭ ಡಾ.ಕಾವೇರಿ ಕಿವಿ ಮಾತು ಹೇಳಿದರು.

ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅರಿಯಲು ಕರೆಕೊಟ್ಟರು.

ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಡಿಕೇರಿಯ ಕೃಪಾ ದೇವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಖಜಾಂಚಿ ಕೆ.ಪಿ.ಪರಮೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ನಂದೀಶ್, ಮಹಾತ್ಮಾ ಗಾಂಧಿ ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲೆ ಟಿ.ಎ.ಲಿಖಿತಾ, ಕನ್ನಡ ಉಪನ್ಯಾಸಕ ಮಂಜೇಶ್ ಇತರರಿದ್ದರು. ಇದೇ ಸಂದರ್ಭ ಸಾಹಿತಿಗಳಾದ ಡಾ.ಕಾವೇರಿ, ಕೃಪಾ ದೇವರಾಜು ಹಾಗೂ ಸಾಧಕಿ ಪ್ರೇಮಾ ಮಹದೇವಪ್ಪ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net