ಆ.೨ ರಂದು ಕಕ್ಕಡ-೧೮ ಕಾರ್ಯಕ್ರಮ

N.U.NACHAPPA
Published on

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಆ.೨ರಂದು ನಡೆಯುವ ಕಕ್ಕಡ-೧೮ ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಹಾಗೂ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿರಿಯ ಮುತ್ಸದಿ ಬಿ.ಕೆ.ಹರಿಪ್ರಸಾದ್ ಅವರು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತಕ್ಕಾಗಿ ಸಿಎನ್‌ಸಿ ನಡೆಸುತ್ತಿರುವ ಶಾಂತಿಯುತ ಹೋರಾಟಕ್ಕೆ ಸುದೀರ್ಘ ಕಾಲದಿಂದ ಬೆಂಬಲ ನೀಡುತ್ತಾ ಬಂದಿದ್ದಾರೆ. ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸುವುದು, ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು/ಗನ್ ಹಕ್ಕುಗಳ ಮಹತ್ವದ ಕುರಿತು ಪಾರ್ಲಿಮೆಂಟ್‌ನಲ್ಲಿ ದೇಶದ ಸರ್ಕಾರದ ಗಮನ ಸೆಳೆದಿದ್ದಾರೆ. ೨೦೧೯ ರ ಎಸ್‌ಸಿ ಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆಯ ಸಮಯದಲ್ಲಿ ಕೊಡವ ಬುಡಕಟ್ಟು ವರ್ಗೀಕರಣದ ಕಾಳಜಿಯನ್ನು ಮುನ್ನಲೆಗೆ ತಂದರು. ಕಕ್ಕಡ-೧೮ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಎನಿಸಿದೆ ಎಂದು ವಿವರಿಸಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಗುವುದು ಮತ್ತು ಕಕ್ಕಡ-೧೮ ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಗುವುದು. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆದಿಮಸಂಜಾತ ಕೊಡವರು ಆರಾಧಿಸುವ ಪ್ರಕೃತಿ ಸಿರಿಯ ಕೊಡವ ಮಾತೃಭೂಮಿಯನ್ನು ಉಳಿಸಿಕೊಳ್ಳುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು. ಸಿಎನ್‌ಸಿ ಸಂಘಟನೆ ನಡೆಸುತ್ತಿರುವ ಸಾರ್ವತ್ರಿಕ ಕಕ್ಕಡ-೧೮ ಆಚರಣೆಯಲ್ಲಿ ಸರ್ವ ಕೊಡವ, ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net