ವಿವಿಧ ಕ್ಷೇತ್ರದವರಿಗೆ ಅಕ್ಕ ಮಹಾದೇವಿ ಸದ್ಭಾವನ ಪ್ರಶಸ್ತಿ ಪ್ರದಾನ

13
Published on

ಮೈಸೂರು: ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಅಕ್ಕ ಮಹಾದೇವಿ ಸದ್ಭಾವನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಸೇವೆಗಾಗಿ ಮಂಗಳಾ ಮುದ್ದು ಮಾದಪ್ಪ, ಶರಣತತ್ವ ಪ್ರಚಾರ ಮತ್ತು ಸಂಘಟನೆಯಲ್ಲಿನ ಕಾರ್ಯಕ್ಕಾಗಿ ಶಾರದ ಶಿವಲಿಂಗಸ್ವಾಮಿ ಮತ್ತು ಪ್ರಕಾಶನ ಕ್ಷೇತ್ರದ ಸೇವೆಗಾಗಿ ಎಸ್.ವಿ.ಪವಿತ್ರಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲೇಖಕ ಬನ್ನೂರು ಕೆ.ರಾಜು ಮಾತನಾಡಿ, ಶತಮಾನಗಳಿಂದ ನಿರ್ಲಕ್ಷ್ಯ, ಅವಹೇಳನಕ್ಕೆ ಒಳಗಾಗಿದ್ದ ಸೀ ಕುಲಕ್ಕೆ ಅನುಭವ ಮಂಟಪ ಸ್ವಾತಂತ್ರ್ಯ ಒದಗಿಸಿದೆ. ಇದರ ಮೂಲಕ ಬೆಳಕಿಗೆ ಬಂದ ಅಕ್ಕ ಮಹಾದೇವಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಶರಣ ಶರಣೆಯರ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿದ್ದ ಅಕ್ಕ ಮಹಾದೇವಿ ಹೆಸರೇ ಒಂದು ರೋಮಾಂಚನಕಾರಿ ವ್ಯಕ್ತಿತ್ವವಾಗಿದೆ ಎಂದು ಬಣ್ಣಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯದ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆಸುವಂತಹ ವಿಷಯಗಳನ್ನು ನಾವು ತಿಳಿಯಬೇಕಿದೆ. ಚನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ಅಕ್ಕಳ ಜ್ಞಾನ ಸಂಪತ್ತನ್ನು ಕೊಂಡಾಡಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ ಅವರ ವಚನಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಹೇಗೆ ನಾವು ಬದುಕಬೇಕು ಎಂಬುದನ್ನು ಅರಿಯಬೇಕು ಎಂದರು.
ಸಮಾಜ ಸೇವಕಿ ವಿದ್ಯಾ, ಶರಣ ಸಾಹಿತ್ಯ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಬಸವೇಶ್ವರ ಸಾಂಸ್ಕ ೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net