ಅಕ್ಕಮಹಾದೇವಿ ಜೀವನ ಸ್ತ್ರೀ ಕುಲಕ್ಕೆ ಅನುಕರಣೀಯ

16 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬದುಕಿನ ಏರಿಳಿತಗಳಿಗೆ ಅಂಜದೆ ಸಮಚಿತ್ತದಿಂದ ಸ್ವೀಕರಿಸುವ ಮನೋಬಲ ಬೆಳೆಸಿಕೊಳ್ಳಲು ಅಕ್ಕಮಹಾದೇವಿ ಜೀವನ ನಮಗೆ ಮಾದರಿಯಾಗುತ್ತದೆ. ಸ್ತ್ರೀ ಕುಲಕ್ಕೆ ಸದಾ ಅನುಕರಣೀಯವಾಗಿರುವ ಅಕ್ಕಮಹಾದೇವಿಯು ಭಾರತೀಯ ದಾರ್ಶನಿಕ ಲೋಕದ ಮಿನುಗುತಾರೆ ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಆತಿಥ್ಯದಲ್ಲಿ ಲಿಂಗಾಯತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯವೆಂಬ ದಾರ್ಶನಿಕ ಸಾಹಿತ್ಯವನ್ನು ನೀಡಿದವರು ಅಕ್ಕಮಹಾದೇವಿ. ಅನುಭವ ಮಂಟಪದ ಶರಣ ಶರಣೆಯರಲ್ಲಿ ಅಗ್ರಗಣ್ಯಳಾಗಿ ನಾಡಿನ ಆಧ್ಯಾತ್ಮ ಲೋಕದ ಧ್ರುವತಾರೆಯಾದರು ಎಂದರು.

ಸಾನ್ನಿಧ್ಯ ವಹಿಸಿದ್ದ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಮಾತನಾಡಿ, ಅಕ್ಕಮಹಾದೇವಿ ಸಮಾಜದ ನಿಂದನೆ, ಟೀಕೆಗಳನ್ನು ಸಹಿಸಿಕೊಂಡು ಆಧ್ಯಾತ್ಮ ಪಥದತ್ತ ಸಮಚಿತ್ತದಿಂದ ಸಾಗಿದರು. ಅವರು ಎಲ್ಲ ಮಹಿಳೆಯರಿಗೆ ಆದರ್ಶ ಪ್ರಾಯವಾಗಿದ್ದಾರೆ ಎಂದರು.

ಮೃತ್ಯು0ಜಯ ಕಾಲೇಜಿನ ಪ್ರಾಧ್ಯಾಪಕಿ ಡಾ. ವೀಣಾ ಯಲಿಗಾರ ಉಪನ್ಯಾಸ ನೀಡಿದರು. ಪಾರ್ವತಿ ಹಾಲಭಾವಿ ಅಧ್ಯಕ್ಷತೆ ವಹಿಸಿದ್ದರು.

ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಸವಿತಾ ಅಮರಶೆಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಡಾ. ಸುವರ್ಣಾ ಬಿರಾದಾರ, ಮುಕ್ತಾ ಸವಡಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಸಂಧ್ಯಾ ಅಂಬಡಗಟ್ಟಿ, ನಾಗರತ್ನಾ ಹಡಗಲಿ, ಸುಧಾ ಕಬ್ಬೂರ, ಪ್ರೊ. ವಿ.ಸಿ. ಸವಡಿ, ಶಂಕರ ಕುಂಬಿ, ಶಿವಶರಣ ಕಲಬಶೆಟ್ಟರ, ಎಂ.ಎಸ್. ಶಿರಿಯಣ್ಣವರ, ಇತರರಿದ್ದರು. ಮಕ್ಕಳ ವೇಷಭೂಷಣ, ವಚನ ಕಂಠಪಾಠ, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಡಾ. ಸುವರ್ಣಾ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net