

ಮೈಸೂರು: ಮಹಿಳಾ ಆಸ್ಮಿತೆ ದಮನದ ವಿರುದ್ಧ ಹೋರಾಡುವ ಮೂಲಕ ಸಮಾಜದಲ್ಲಿ ಘನತೆ ತಂದುಕೊಟ್ಟಿದ್ದು ಅಕ್ಕ ಮಹಾದೇವಿ ಎಂದು ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಅಕ್ಕಮಹಾದೇವಿ ಸಂಶೋಧಾನಾ ಮತ್ತು ವಿಸ್ತರಣಾ ಪೀಠದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಪಿತೃಸತ್ತೆಯ ಬಹುರೂಪಕ-ಮಹಿಳೆಯರ ಕಥನಗಳ ಪುಸ್ತಕ ಬಿಡುಗಡೆ, ಸಮಾಜೋ ಸಾಂಸ್ಕೃತಿಕ ಅಧ್ಯಯನ ಹಾಗೂ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ನಮ್ಮ ಊಹೆಗೂ ಕಷ್ಟ ಅನಿಸುವಂತಹ ಕಠಿಣ ದಾರಿಯಲ್ಲಿ ಅಕ್ಕ ಮಹಾದೇವಿ ನಡೆದರು. 19 ಮತ್ತು 20ನೇ ಶತಮಾನದಲ್ಲಿಯೂ ದಿಟ್ಟ ಹೆಜ್ಜೆ ಇಟ್ಟ ಅಕ್ಕ ಮಹಾದೇವಿ ನಮಗೆ ಮಾದರಿಯಾಗಿದ್ದಾರೆ ಎಂದರು.
ಸಮಾಜದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪಿತೃಪ್ರಧಾನ ವ್ಯವಸ್ಥೆಯು ಮಹಿಳಾ ಅಸ್ಮಿತೆ ದಮನವು ಯಾವ ರೂಪದಲ್ಲಿ ನಡೆದಿದೆ ಎನ್ನುವುದನ್ನು ಈ ಕೃತಿ ಮಂಡಿಸುತ್ತದೆ ಎಂದರು.
ಕರ್ನಾಟಕದ ಪ್ರಥಮ ಮಹಿಳಾವಾದಿ, ಚಿಂತಕಿ, ಲೇಖಕಿ ಎಂದು ಹೆಸರಾಗಿರುವ ಅಕ್ಕ ಮಹಾದೇವಿ ಅವರು ಪುರುಷ ಪ್ರಧಾನ ವ್ಯವಸ್ಥೆಗೆ ಪ್ರತಿರೋಧ ಒಡ್ಡುತ್ತಾ ಮಹಿಳೆಯರ ಸಮಾನತೆಗಾಗಿ, ಬಿಡುಗಡೆಗಾಗಿ ಹಾಗೂ ಅವರ ಅಸ್ಮಿತೆಗಾಗಿ ನಡೆಸುತ್ತಿದ್ದ ಹೋರಾಟ ಇಂದಿಗೂ ಚಾಲ್ತಿಯಲ್ಲಿದೆ ಎಂದು ವಿಶ್ಲೇಷಿಸಿದರು.
ಭಾರತ ಸ್ವಾತಂತ್ರ್ಯ ಪಡೆಯಲು ಯಾವ ರೀತಿ ಸಂಘರ್ಷ ಮಾಡಿತ್ತೋ ಹಾಗೂ ನಂತರದ ಕಾಲಘಟ್ಟದಲ್ಲಿ ದಲಿತರ ಸಮಾನತೆ ಹಾಗೂ ಸ್ವಾತಂತ್ರ್ಯ ಹೇಗೆ ಆದ್ಯತೆಯ ಪ್ರಶ್ನೆಯಾಗಿತ್ತೋ ಹಾಗೆಯೇ ಇಂದಿನ ಮೌಢ್ಯತೆ ಮಹಿಳಾ ಸಮಾನತೆಯಾಗಿದೆ ಎಂದರು.
ಗಂಡು, ಹೆಣ್ಣು ಹುಟ್ಟುವುದು ಪ್ರಕೃತಿಯ ನಿಯಮ. ಅದು ಪ್ರಕೃತಿಯ ದೃಷ್ಟಿಯಲ್ಲಿ ಮೇಲೂ ಅಲ್ಲ, ಕೀಳು ಅಲ್ಲ. ಅದು ನಿಸರ್ಗದ ಒಂದು ವಿದ್ಯಮಾನ. ಹೆಣ್ಣು-ಗಂಡು ಇದ್ದರೆ ಮಾತ್ರ ನಿಸರ್ಗ ಮುಂದುವರೆಯುತ್ತದೆ. ಆದರೆ ಭಿನ್ನ ಲಿಂಗ ಇರುವ ಕಾರಣಕ್ಕೆ ದಮನಕ್ಕೆ ಒಳಗಾಗುವುದು ನಿರಂತರವಾಗಿದ್ದು, ಹೆಣ್ಣನ್ನು ಎರಡನೇಯ ದರ್ಜೆ ಪ್ರಜೆಯಾಗಿ, ಮೂರನೇ ದರ್ಜೆಯ ಪ್ರಜೆಯಾಗಿ ಬಾಳುತ್ತ ಬಂದಿರುವ ಆ ವಿದ್ಯಮಾನ ಸಾಮಾಜಿಕವಾದ್ದದ್ದೇ ಹೊರತು, ನೈಸರ್ಗಿಕವಾದುದ್ದಲ್ಲ ಎಂದರು.
ಗಂಡನಿಂದ, ತಂದೆಯಿಂದ, ಬಂಧುಗಳಿಂದ ಯಾವುದೋ ಒಂದೊಂದು ಕಾರಣಕ್ಕೆ ಅವರ ರೆಕ್ಕೆಯನ್ನು ಕತ್ತರಿಸಲಾಗಿದೆ. ಹೀಗೆ ಹೆಣ್ಣನ್ನು, ಆಕೆಯ ಮನಸ್ಸನ್ನು ಹಿಂದಿನಿಂದಲೂ ನಿಯಂತ್ರಿಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
ಆಧುನಿಕ ಯುಗದಲ್ಲೂ ಹೆಣ್ಣು ಶೋಷಣೆಗೆ ಒಳಪಡುತ್ತಿದ್ದಾಳೆ. ಜಾಗತೀಕರಣ, ನವ ಬಂಡವಾಳಶಾಹಿ ಮಹಿಳೆಯನ್ನು ಮತ್ತೊಮ್ಮೆ ಬೋಗದ ಸರಕು ಎಂದು ಬಿಂಬಿಸಲಾಗುತ್ತಿದೆ. ಮಹಿಳೆಯರು ವಿದ್ಯಾವಂತರಾದ ಮೇಲೆ, ಪ್ರಜ್ಞಾವಂತರಾದ ಮೇಲೆ ತಮ್ಮ ರೂಪದ ಹಾಗೂ ದೇಹದ ಚೌಕಟ್ಟಿನ ಹಂಬಲದಿಂದ ಬಿಡುಗಡೆ ಹೊಂದಬೇಕಿತ್ತು. ಆದರೆ ಇಂದಿನ ಸಾಮಾಜಿಕ ಮಾಧ್ಯಮಗಳು, ಜಾಹೀರಾತು ಮಾಧಮಗಳು ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಹೆಣ್ಣಿನ ದೇಹ ಪ್ರದರ್ಶನಕ್ಕಿರುವ ಹಾಗೂ ಮಾರಾಟಕ್ಕಿರುವ ವಸ್ತುವನ್ನಾಗಿ ಆಗುವ ರೀತಿಯಲ್ಲಿ ತಯಾರು ಮಾಡಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಬದುಕಬೇಕು. ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದಾರೆ. ಆದರೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರು ಬಸವಣ್ಣನವರ ವಚನಗಳ ಮಹತ್ವವನ್ನು ಅರಿತು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಕೋರಿದರು.
ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರಾಧ್ಯಕ್ಷ ಅಧ್ಯ್ಯಕ್ಷ ಮ.ಗು.ಸದಾನಂದಯ್ಯ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎನ್.ದೇವಮ್ಮಣಿ, ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕಿ ಪ್ರೊ.ಕವಿತಾ ರೈ ಇತರರು ಇದ್ದರು.