

ಮಂಡ್ಯ: ಅಮೆರಿಕದಲ್ಲಿ ಕನ್ನಡಿಗರು ಸ್ಥಾಪಿಸಿರುವ ‘ಅಕ್ಕ’ ಸಂಸ್ಥೆಯು 25 ವರ್ಷ ಪೂರೈಸಿ 25ರ ಬೆಳ್ಳಿ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ‘ಅಕ್ಕ ಚಾರಿಟಿ ಓಟ-ಅಮ್ಮನ ನಾಡಿನ ಅಕ್ಕರೆಯ ನಂಟು’ ಘೋಷವಾಕ್ಯದಡಿ ಅ.19ರಂದು ಬೆಳಗ್ಗೆ 7 ಗಂಟೆಗೆ 5ಕೆ ವಾಕಥಾನ್ ಆಯೋಜಿಸಲಾಗಿದೆ ಎಂದು ‘ಅಕ್ಕ’ ಸಂಸ್ಥೆಯ ಅಧ್ಯಕ್ಷ ಮಧುರಂಗಯ್ಯ ತಿಳಿಸಿದರು.
‘ಅಕ್ಕ ಚಾರಿಟಿ ಓಟ-ಅಮ್ಮನ ನಾಡಿನ ಅಕ್ಕರೆಯ ನಂಟು’ ಮಂಡ್ಯ 5ಕೆ ಕಾರ್ಯಕ್ರಮವನ್ನು ‘ಅಕ್ಕ’ ಸಂಸ್ಥೆ, ಜಿಲ್ಲಾಡಳಿತ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಡ್ಯ ಜಿಲ್ಲಾ ಶಾಖೆ, ವನ್ಯ ಜೀವಿ ಸಂರಕ್ಷಣಾ ಹಿತಾಸಕ್ತಿ ಸಂಸ್ಥೆ ಮತ್ತು ಮಂಡ್ಯ ಜಿಲ್ಲೆಯ ಎಲ್ಲ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಅ.19ರ ಭಾನುವಾರ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಇದರ ಉದ್ದೇಶ ಕನ್ನಡಿಗರ ಏಕತೆ, ಆರೋಗ್ಯ ಜಾಗೃತಿ ಮತ್ತು ಸಾಮಾಜಿಕ ಸೇವೆಯ ಸಂದೇಶವನ್ನು ಜನರಿಗೆ ತಲುಪಿಸುವುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಘನ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಶಾಸಕ ಪಿ. ರವಿಕುಮಾರ್ ಗಣಿಗ, ಹಾಲಿ ಶಾಸಕರು, ಮಾಜಿ ಶಾಸಕರು, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್. ನಂದಿನಿ, ‘ಅಕ್ಕ’ ಸಂಸ್ಥೆಯ ಚೇರ್ಮನ್ ಟ್ರಸ್ಟಿ ಅಮರನಾಥಗೌಡ, ಮಾಜಿ ಅಧ್ಯಕ್ಷ ದಯಾಶಂಕರ್ ಆಡಪ್ಪ, ಕಾರ್ಯದರ್ಶಿ ಡಾ. ನವೀನ್ ಕೃಷ್ಣ ಭಾಗವಹಿಸಲಿದ್ದಾರೆ ಎಂದರು.
ಓಟದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಸಿದ್ಧ ತಾರೆಯರಾದ ನೆನಪಿರಲಿ ಪ್ರೇಮ್, ಅಮೃತ ಪ್ರೇಮ್, ಸಾನ್ಯ, ನವೀನ್ ಸಜ್ಜು, ಸಿರಿ ಪ್ರಭಾಕರ್, ಪ್ರಭಾಕರ್ ಬೋರೇಗೌಡ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವನ್ಯಜೀವಿ ಸಂರಕ್ಷಣೆಗೆ ಒತ್ತು: ’ಅಕ್ಕ ಚಾರಿಟಿ ಓಟದ’ ಬೆಳ್ಳಿ ಮಹೋತ್ಸವ ಸಂಭ್ರಮದ ಜತೆಗೆ ‘ವನ್ಯಜೀವಿಗಳನ್ನು ಉಳಿಸುವುದು ಐಷಾರಾಮಿ ಅಲ್ಲ, ಅದು ಒಂದು ಸಾರ’ ಎಂಬ ಧ್ಯೇಯವಾಕ್ಯದೊಂದಿಗೆ ‘ಹುಲಿಗಳ ಹೆಜ್ಜೆ ಕಾಡು ಅಭಿವೃದ್ಧಿ ಹೊಂದುತ್ತದೆ ಮತ್ತು ಹಿಮ್ಮುಖವಾಗಿ ಜೀವಂತವಾಗುತ್ತದೆ. ಆದ್ದರಿಂದ ‘ನಾವು ಬದುಕುತ್ತೇವೆ’ ಎಂಬ ಉದ್ದೇಶದಿಂದ ಅಕ್ಕ ಸಂಸ್ಥೆ ಮತ್ತು ವನ್ಯಜೀವಿ ಸಂರಕ್ಷಣಾ ಹಿತಾಸಕ್ತಿ ಸಂಸ್ಥೆ ಸಹಯೋಗದೊಂದಿಗೆ ಪರಿಸರ ಕಾಪಾಡುವುದು, ಬಂಡಿಪುರ, ನಾಗರಹೊಳೆ ಅಭಯಾರಣ್ಯಗಳ ಅಕ್ಕ-ಪಕ್ಕ ಇರುವ ಸ್ಥಳೀಯ ಆದಿವಾಸಿಗಳ ಜೀವನಮಟ್ಟ ಸುಧಾರಿಸಲು, ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಅಕ್ಕ ಸಂಸ್ಥೆಯೊಟ್ಟಿಗೆ ವರ್ಚಸ್ವಿ ಶಂಕರ್ ಅವರ ನೇತೃತ್ವದ ವನ್ಯ ಜೀವಿ ಸಂರಕ್ಷಣಾ ಹಿತಾಸಕ್ತಿ ಸಂಸ್ಥೆ ಸಹ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಾಕಥಾನ್‌ನಲ್ಲಿ 16 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿರುತ್ತದೆ. ಆನ್‌ಲೈನ್ ನೋಂದಣಿ ಶುಲ್ಕ ಉಚಿತವಾಗಿದ್ದು, ನೋಂದಣಿ ಕಡ್ಡಾಯವಾಗಿರುತ್ತದೆ.
ಮಾರ್ಗದ ವಿವರ: ವಾಕಥಾನ್ ಸರ್ ಎಂ.ವಿ. ಸ್ಟೇಡಿಯಂನಿಂದ ಪ್ರಾರಂಭವಾಗಿ ಜೆ.ಸಿ. ವೃತ್ತ, ಪ್ರವಾಸಿ ಮಂದಿರ, ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು, ಬನ್ನೂರು ರಸ್ತೆ, ನೂರಡಿ ರಸ್ತೆ ಮಾರ್ಗವಾಗಿ ಹೊಸಹಳ್ಳಿ ವೃತ್ತ, ವಿ.ವಿ.ರಸ್ತೆ ಮಾರ್ಗವಾಗಿ ಗಾಂಧಿಭವನ-ಸ್ಟೇಡಿಯಂ ತಲುಪಲಿದೆ.
ಸುದ್ದಿಗೋಷ್ಠಿಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕೀಲಾರ, ನಿರ್ದೇಶಕ ಬಸವರಾಜು, ವೈಲ್ಡ್‌ಲೈಫ್ ಕನ್ಸರ್ವೇಷನ್ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ರಾಜಕುಮಾರ್, ಟ್ರಸ್ಟಿಗಳಾದ ವಿನೋದ್, ಶ್ರೀನಿವಾಸ್ ಹಾಜರಿದ್ದರು.