ಕನ್ನಡದ ಪ್ರಥಮ ಕವಿಯತ್ರಿ ಅಕ್ಕ ಧೀಮಂತ ದಿಟ್ಟೆ

25 ckm 4
ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಆಯೋಜಿಸಲಾಗಿದ್ದ ಅಕ್ಕಮ್ಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಸ್ಪತ್ರೆ ಶುಶ್ರೂಷಕಿ ಸಾವಿತ್ರಿ ಯತೀಶ್ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ ಧೀಮಂತ ಆದರ್ಶಮಹಿಳೆ ಎಂದು ಜಿಲ್ಲಾಸ್ಪತ್ರೆಯ ಹಿರಿಯ ಶುಶ್ರೂಷಕಿ ಸಾವಿತ್ರಿಯತೀಶ್ ಅಭಿಪ್ರಾಯಪಟ್ಟರು.

ಅಕ್ಕಮಹಾದೇವಿ ಮಹಿಳಾ ಸಂಘದಿಂದ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಕ್ಕಮಹಾದೇವಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದ ಅನುಭವ ಮಂಟಪವನ್ನು ಪ್ರವೇಶಿಸಿದ ಮೊಟ್ಟಮೊದಲ ಮಹಿಳೆ ಅಕ್ಕ. ವಚನಗಳನ್ನು ರಚಿಸಿ ಸಮಾಜದ ಲೋಪದೋಷಗಳನ್ನು ತಿದ್ದುವ ಪ್ರಯತ್ನ ಮಾಡಿದ ಧೀಮಂತೆ. ಶೋಷಣೆಯ ವಿರುದ್ಧ ಧೈರ್ಯವಾಗಿ ಧ್ವನಿಯೆತ್ತಿ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದರು. ಮಾನಾಪಮಾನಗಳಿಗೆ ಅಂಜದೆ ಅಳುಕದೆ ನೇರ ನುಡಿಯ ಮೂಲಕ ಅಭಿಪ್ರಾಯಗಳನ್ನು ವಚನಗಳ ಮೂಲಕ ನಾಡಿಗೆ ಸಾರಿದ್ದಾರೆ ಎಂದು ಬಣ್ಣಿಸಿದರು.
ಜೀವನ ಜಂಜಾಟವನ್ನು ಧೈರ್ಯವಾಗಿ ಎದುರಿಸಬೇಕೆಂದು ಶತಮಾನಗಳ ಹಿಂದೆಯೆ ನುಡಿದು ನಡೆದವರು. ‘ಬೆಟ್ಟದಮೇಲ್ಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂಬ ವಚನವನ್ನು ವಿಶ್ಲೇಷಿಸಿದ ಸಾವಿತ್ರಿ, ಬದುಕಿನ ಏರಿಳಿತ ಸಮಚಿತ್ತದಿಂದ ನೋಡಬೇಕು. ಆಸೆ ಆಮಿಷಗಳಿಗೆ ಬಲಿಯಾಗಬಾರದು. ಕಷ್ಟಸುಖಗಳು ಸಮುದ್ರದ ನೆರೆತೊರೆಯಂತೆ ಬಂದುಹೋಗುವಂತಹದ್ದು, ಅವೇನೂ ಶಾಶತ್ವವಲ್ಲ. ಸಂತೆಯಲ್ಲಿ ಮನೆಮಾಡಿ ಶಬ್ದಕ್ಕೆ ನಾಚುವುದು ಅಗತ್ಯವಿಲ್ಲ. ಜನರ ನಿಂದನೆಗೆ ತಲೆಕೆಡಿಸಿಕೊಳ್ಳಬಾರದೆಂದು ಹೇಳಿರುವ ಅಕ್ಕ, ನಾಡಿನ ದಿಟ್ಟ ಮಹಿಳೆ ಎಂದರು.
ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆಸಕ್ತಿ ತೋರಬೇಕು. ಹೆಣ್ಣುಮಕ್ಕಳ ಆರೈಕೆಗೆ ಗಮನಕೊಡಬೇಕು. ಮಕ್ಕಳು ಟಿ.ವಿ., ಮೊಬೈಲ್, ಅಂತರ್ಜಾಲದಲ್ಲಿ ಮುಳುಗಿರದಂತೆ ಎಚ್ಚರವಹಿಸಬೇಕು. ಹದಿಹರೆಯದ ಮಕ್ಕಳಲ್ಲಿ ವಿಶೇಷವಾಗಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಂಕುಲಕ್ಕೆ ಹೆಮ್ಮೆಯಾಗಿರುವ ಅಕ್ಕನ ಜನ್ಮದಿನವಿದು. ಶರಣ ಸಮೂಹದಲ್ಲಿ ದಿಟ್ಟತನದಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ಬೆಡಗಿನವಚನಗಳ ಮೂಲಕ ಗಮನಸೆಳೆಯುತ್ತಾಳೆ ಎಂದರು.
ತಂಡದ ಮುಖಂಡೆ ಈಶ್ವರಿ ಹುಲಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನಾಯಕತ್ವಕ್ಕೆ ಅಕ್ಕ ಮಾದರಿ. ಸೇವೆ ಮತ್ತು ಸ್ಥಾನಗಳ ಮೂಲಕ ಸಮಾಜದಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಮುಂದೆ ಬರಬೇಕು ಎಂದರು.
ಸಂಘದ ಪದಾಧಿಕಾರಿಗಳಾದ ಭಾರತಿ ಶಿವರುದ್ರಪ್ಪ, ನಾಗಮಣಿ, ಹೇಮಲತಾ, ವನಜಾಕ್ಷಮ್ಮ ಶಿವರುದ್ರಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net