ಉಜಿರೆಯಲ್ಲಿ ತೆರೆಯಲಿದೆ ‘ಅಕ್ಕ ಕೆಫೆ’: ಗ್ರಾಮೀಣ, ನಗರ ಪ್ರದೇಶಗಳಲ್ಲಿ ಅನುಷ್ಠಾನ : ಮಹಿಳೆಯರ ಸಬಲೀಕರಣಕ್ಕೆ ಯೋಜನೆ

New Project (6)
Published on

ಮನೋಹರ್ ಬಳಂಜ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಪ್ರಮುಖ ವಾಣಿಜ್ಯ ನಗರವಾದ ಉಜಿರೆಯಲ್ಲಿ ‘ಅಕ್ಕ ಕೆಫೆ’ ಶುಭಾರಂಭಗೊಳ್ಳಲು ಸಜ್ಜಾಗುತ್ತಿದೆ. ಜಿಲ್ಲೆಯಲ್ಲಿ ಉಳ್ಳಾಲ, ಬೆಳ್ತಂಗಡಿಗೆ ಅಕ್ಕ ಕೆಫೆ ಮಂಜೂರುಗೊಂಡಿದೆ. ಈ ಪೈಕಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಕ ಕೆಫೆಗೆ ಸ್ಥಳ ಗುರುತಿಸಿದ್ದು, ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪೀಠೋಪಕರಣಗಳು ಈಗಾಗಲೇ ಬಂದಿದ್ದು ಕೆಲವು ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಹಲವು ಶೈಕ್ಷಣಿಕ ಸಂಸ್ಥೆ, ಜನರ ಓಡಾಟ, ಪ್ರವಾಸಿಗರು, ಸಾವಿರಾರು ವಾಹನಗಳ ಸಂಚಾರವಿರುವ ಉಜಿರೆ- ಚಾರ್ಮಾಡಿ ರಸ್ತೆಯಲ್ಲಿ ಅಕ್ಕ ಕೆಫೆ ಆರಂಭವಾಗಲಿದೆ. ರಾಜ್ಯದಲ್ಲಿ ಕೌಶಲ ಅಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನವನ್ನು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳಾಗಿ ಸಂಘಟಿಸಿ ಅವರಿಗೆ ಜೀವನೋಪಾಯ ಚಟುವಟಿಕೆ ಒದಗಿಸುವುದರ ಜತೆಗೆ ಸಾಮಾಜಿಕ, ಆರ್ಥಿಕತೆಯ ಅಭಿವೃದ್ಧಿಪಥದೊಂದಿಗೆ ಕೌಶಲ ಅಭಿವೃದ್ಧಿಪಡಿಸಿ ಜೀವನೋಪಾಯದೊಂದಿಗೆ ಸಬಲೀಕರಣದ ಬದುಕು ರೂಪಿಸುವ ನಿಟ್ಟಿನಲ್ಲಿ ಅಕ್ಕ ಕೆಫೆ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟುಕುವ ದರದಲ್ಲಿ ಒದಗಿಸಲು ಮಹಿಳೆಯರೇ ಈ ಕ್ಯಾಂಟೀನ್ ನಡೆಸುತ್ತಾರೆ. ಅಕ್ಕ ಕೆಫೆ ಸ್ಥಾಪನೆಗೆ ಸ್ಥಳದ ಒಡೆತನ ಹೊಂದಿರುವ ಇಲಾಖೆ, ಜಿಪಂ, ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಆಯ್ಕೆಯಾದ ಗ್ರಾಮದ ಸ್ವ-ಸಹಾಯ ಸಂಘ ಗುಂಪು, ತಾಲೂಕು ಪಂಚಾಯಿತಿಯೊಂದಿಗೆ ಒಪ್ಪಂದವಾಗಬೇಕು.

ಕ್ಲಾಸಿಕ್ ಮಾದರಿ ಕೆಫೆ

ಪ್ರೇರಣ ಸಂಜೀವಿನಿ ಮಹಿಳಾ ಒಕ್ಕೂಟದ ಮೂಲಕ ಆಯ್ಕೆಯಾದ ಆದಿಪರಾಶಕ್ತಿ ಸ್ವ-ಸಹಾಯ ಸಂಘ ಇದನ್ನು ನಿರ್ವಹಿಸಲಿದೆ. ಇದರ ಸಂಪೂರ್ಣ ಜವಾಬ್ದಾರಿ ಸ್ವ-ಸಹಾಯ ಸಂಘ ಒಕ್ಕೂಟ, ರಚಿಸಲ್ಪಟ್ಟಿರುವ ಸಮಿತಿ ನಿರ್ವಹಿಸುತ್ತದೆ. ಇಲ್ಲಿ ನಿರ್ಮಾಣವಾಗುವ ಅಕ್ಕ ಕೆಫೆ ಕ್ಲಾಸಿಕ್ ಮಾದರಿಯದ್ದಾಗಿದ್ದು, 500 ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಬೆಳಗ್ಗಿನಿಂದ ಸಂಜೆ ತನಕ ಕಾರ್ಯನಿರ್ವಹಿಸಲಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಇರಲಿದೆ. ಆಯ್ಕೆಯಾದ ಸ್ವ-ಸಹಾಯ ಸಂಘದ ನಾಲ್ವರು ಮಹಿಳೆಯರು ತರಬೇತಿ ಪಡೆದಿದ್ದಾರೆ.

8,40,000 ರೂ. ಅನುದಾನ

ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆಗೆ 8,40,000 ರೂ. ಅನುದಾನ ಬಿಡುಗಡೆಗೊಂಡಿದೆ. ಈ ಮೊತ್ತವು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮೂಲಕ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದವರಿಗೆ ಬಿಡುಗಡೆ ಮಾಡಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ಆದೇಶಿಸಲಾಗಿದೆ. ಅಕ್ಕ ಕೆಫೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಿದ್ದು, ಮಿತ ದರದಲ್ಲಿ ಸ್ಥಳೀಯ ಬೇಡಿಕೆಯ ಆಹಾರ ಸಿಗಲಿವೆ. ರುಚಿ, ಪೌಷ್ಟಿಕತೆಗೆ ಅನುಗುಣವಾಗಿ ಪ್ರಮಾಣಿತ ಪಾಕ ವಿಧಾನ ಅನುಸರಿಸಲಾಗುವುದು. ಮಧ್ಯಾಹ್ನ ಊಟ ಇದ್ದು ಕುಳಿತು ತಿನ್ನುವ ವ್ಯವಸ್ಥೆ ಇರಲಿದೆ.

ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆಯ ಬಹುಪಾಲು ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಎರಡು ಅಕ್ಕ ಕೆಫೆ ಮಂಜೂರಾಗಿದ್ದು, ಅದರಲ್ಲಿ ಬೆಳ್ತಂಗಡಿ ಉಜಿರೆಯ ಕೆಫೆಯ ಕಾಮಗಾರಿ ವೇಗದಿಂದ ಸಾಗಿದೆ. ಇನ್ನೇನು ಕೆಲ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಮಾದರಿ ಕಾರ್ಯಕ್ರಮ ಮೂಡಿಬರಲಿದೆ. ಪೀಠೋಪಕರಣಗಳು ಶೀಘ್ರ ಬರಲಿದ್ದು, ಬಂದ ತಕ್ಷಣ ಉದ್ಘಾಟನೆ ನಡೆಯಲಿದೆ. ಭವಾನಿ ಶಂಕರ್, ಇಒ, ಬೆಳ್ತಂಗಡಿ ತಾಪಂ ಈಗಾಗಲೇ ನಮ್ಮ ಸಂಘದ ನಾಲ್ವರು ತರಬೇತಿ ಪಡೆದಿದ್ದಾರೆ. ಸದ್ಯ 6 ಜನರ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರ ಅವಶ್ಯಕತೆ ಕಂಡುಬಂದರೆ ಗುಂಪಿನ ಇತರ ಸದಸ್ಯರಿಗೂ ಅವಕಾಶ ನೀಡಲಾಗುವುದು. ಇಡ್ಲಿ, ಸಾಂಬಾರ್, ದೋಸೆ, ಪುಂಡಿ ಗಸಿ, ಸೇಮಿಗೆ, ಮಧ್ಯಾಹ್ನ ಊಟ, ಗಂಜಿ ಊಟ ಹಾಗೂ ಸ್ಥಳೀಯ ಬೇಡಿಕೆಯ ಆಹಾರ ಪದಾರ್ಥಗಳನ್ನು ಮಿತದರದಲ್ಲಿ ಒದಗಿಸುವ ಯೋಜನೆ ರೂಪಿಸಲಾಗಿದೆ. ಶೀಲಾವತಿ ಎಂ.ಕೆ., ಅಧ್ಯಕ್ಷರು, ಆದಿಪರಾಶಕ್ತಿ ಸ್ವ-ಸಹಾಯ ಸಂಘ, ಉಜಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net