

ಗುಂಡ್ಲುಪೇಟೆ: ಸ್ವಸಹಾಯ ಸಂಘಗಳ ಮಹಿಳೆಯರ ಬಲವರ್ಧನೆಗಾಗಿ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಿರ್ಮಿಸಿರುವ ಅಕ್ಕ ಕೆಫೆ ಹಾಗೂ ರೈತ ಸಂತೆ ಮಳಿಗೆಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಇನ್ನೂ ದೊರಕಿಲ್ಲ.
ಸರ್ಕಾರ ಮಹಿಳೆಯರ ಬಲವರ್ಧನೆಗಾಗಿ ಜಿಲ್ಲಾ ಪಂಚಾಯಿತಿ ಮೂಲಕ ಹೊಸದಾದ ಯೋಜನೆ ರೂಪಿಸಿದೆ. ತಾಲೂಕಿನ ಸಂಜೀವಿನಿ ಒಕ್ಕೂಟದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಜಿಲ್ಲಾ ಪಂಚಾಯಿತಿ ಕೆಫೆ ಮತ್ತು ರೈತ ಸಂತೆಗಳನ್ನು ಮಂಜೂರು ಮಾಡಿ ಅಗತ್ಯವಾದ ಅನುದಾನವನ್ನು ನೀಡಿದೆ. ಈ ಅನುದಾನದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕೆಆರ್‌ಎಡಿಎಲ್ ತಾಲೂಕಿನಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಿತ್ತು.
ತೆರಕಣಾಂಬಿ ಗ್ರಾಮ ಪಂಚಾಯಿತಿಯು ಗ್ರಾಮದ ರೈತ ಸಂಪರ್ಕ ಕೇಂದ್ರ ಮತ್ತು ಪೊಲೀಸ್ ಠಾಣೆಯ ನಡುವೆ ನೀಡಿದ್ದ ಸ್ಥಳ ತಗ್ಗು ಪ್ರದೇಶದಲ್ಲಿದ್ದರಿಂದ ಈ ಸ್ಥಳದಲ್ಲಿ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು ಸವಾಲಾಗಿತ್ತು. ಇದರಿಂದ ಇಲ್ಲಿಗೆ ನೂರಾರು ಲೋಡ್‌ಗಳಷ್ಟು ಮಣ್ಣು ತುಂಬಿಸಿ ಭೂಮಿಯನ್ನು 5 ಅಡಿಗಳಷ್ಟು ಎತ್ತರಿಸಿದ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಯಿತು. ಕುಂಟುತ್ತಾ ತೆವಳುತ್ತಾ ಸಾಗಿದ ಕಾಮಗಾರಿ ಕಳೆದ ಆರು ತಿಂಗಳ ಹಿಂದೆಯೇ ಪೂರ್ಣಗೊಂಡಿದೆ.
56.69 ಲಕ್ಷ ರೂ. ವೆಚ್ಚದ ಕಾರ್ಯ: 2.69 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ರಸ್ತೆ ಬದಿಯಲ್ಲಿ ನಿರ್ಮಿಸಿರುವ ಅಕ್ಕ ಕೆಫೆ ಎನ್ನುವ ವಿಭಿನ್ನ ಹೆಸರಿನ ಕ್ಯಾಂಟೀನ್ ಆಕರ್ಷಕವಾಗಿದೆ. 54 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ರೈತ ಸಂತೆಯಲ್ಲಿ 36 ಕೌಂಟರುಗಳಿದ್ದು ಇವು ಸಹ ಬಳಕೆಗೆ ಸಿದ್ಧ್ದವಾಗಿವೆ. ನಿರ್ಮಿಸಿರುವ ರೈತ ಸಂತೆಯಲ್ಲಿ ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಕೌಂಟರ್‌ಗಳು ಹಾಗೂ ಮುಂಭಾಗದಲ್ಲಿ ಮಹಿಳೆಯರಿಂದಲೇ ನಡೆಸಲಿರುವ ಅಕ್ಕ ಕೆಫೆ ಇದೆ.
ಉದ್ಘಾಟನೆಗೆ ಮೀನಮೇಷ: ಕಳೆದ ನಾಲ್ಕು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆದ ನಂತರ ಬಂಡೀಪುರಕ್ಕೆ ಬರುವ ನಿರೀಕ್ಷೆಯಿತ್ತು. ಆ ಸಂದರ್ಭದಲ್ಲಿ ಇದನ್ನು ಉದ್ಘಾಟಿಸುವ ಸಲುವಾಗಿ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ, ಗಣ್ಯರಿಂದಲೇ ಉದ್ಘಾಟಿಸುವ ಸಲುವಾಗಿ ದಿನಾಂಕ ಮುಂದೂಡಲಾಗುತ್ತಿದೆ. ಆದರೂ, ಇನ್ನೂ ಉದ್ಘಾಟನೆ ಭಾಗ್ಯ ದೊರಕಿಲ್ಲದಿರುವುದರಿಂದ ಇದರ ನಿರ್ಮಾಣದ ಉದ್ದೇಶ ಈಡೆರದಂತಾಗಿದೆ ಎಂಬುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಕೆಆರ್‌ಎಡಿಎಲ್ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃದಿಂದ ರೈತ ಸಂತೆ ಮತ್ತು ಅಕ್ಕ ಕೆಫೆ ನಿರುಪಯುಕ್ತವಾಗಿದ್ದು, ಇದನ್ನು ನಿರ್ಮಿಸಿದ ಉದ್ದೇಶವೇ ನಿರಾರ್ಥಕವಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಿಸಿದವರು ತೆರಿಗೆದಾರರ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಕೂಡಲೇ ಬಳಕೆಗೆ ತರಬೇಕು.
ಮಹೇಶನಾಯ್ಕ ರೈತ ಮುಖಂಡ
ಗ್ರಾಮದಲ್ಲಿ ರೈತ ಸಂತೆ ಹಾಗೂ ಅಕ್ಕ ಕೆಫೆ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಸ್ಥಳ ದೊರಕದೆ ಕಾಮಗಾರಿ ಆರಂಭಿಸುವುದು ವಿಳಂಬವಾಗಿತ್ತು. ನಂತರ ತಗ್ಗು ಪ್ರದೇಶದಲ್ಲಿ ಸ್ಥಳಾವಕಾಶ ನೀಡಿದ್ದರಿಂದ ಅದನ್ನು ಎತ್ತರಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಕೇವಲ ವಿದ್ಯುತ್ ಸಂಪರ್ಕ ಮಾತ್ರ ಬಾಕಿಯುಳಿದಿದ್ದು ಸದ್ಯದಲ್ಲಿಯೇ ಅದನ್ನು ಒದಗಿಸಲಾಗುವುದು. ಕೆಫೆ ಮತ್ತು ಸಂತೆಯ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಯೇ ನಿರ್ವಹಿಸಲಿದೆ.
ಮಾದಶೆಟ್ಟಿ, ಕೆಆರ್‌ಎಡಿಎಲ್ ಸಂಸ್ಥೆಯ ಅಧಿಕಾರಿ