

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿ ಹಾಗೂ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ, ಸಾಹಿತ್ಯ ಸಂಘ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಕವಿ ಕಾವ್ಯ ಪರಂಪರೆ ಸರಣಿ ಉಪನ್ಯಾಸ 1 ಕಾರ್ಯಕ್ರಮ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಜರುಗಿತು.
‘ಭಾರತೀಯ ಸಾಹಿತ್ಯ ತಿಲಕ ಕಾಳಿದಾಸ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಗರದ ಶಾರದಾ ಪಪೂ ಕಾಲೇಜು ಉಪನ್ಯಾಸಕ ರಮೇಶ್ ಆಚಾರ್ಯ, ಭಾರತೀಯ ಸಾಹಿತ್ಯಕ್ಕೆ ತಿಲಕ ಪ್ರಾಯನಾದವ ಕಾಳಿದಾಸ. ಸಾಹಿತ್ಯಕ್ಕೆ ಅಪೂರ್ವ ಕೃತಿಗಳನ್ನು ನೀಡಿದ್ದಾನೆ ಎಂದರು. ಕಾಳಿದಾಸನ ಮೇಘದೂತ, ರಘುವಂಶ ಮಹಾಕಾವ್ಯ, ಕುಮಾರಸಂಭವ, ಮೇಘದೂತ, ಋತುಸಂಹಾರ, ಮೂರು ನಾಟಕಗಳಾದ ಮಾಳವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲ, ವಿಕ್ರಮೋರ್ವಶೀಯಂ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಎಂ.ಪಿ. ಸ್ವಾಗತಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ, ಕಾರ್ಯದರ್ಶಿ ಹರೀಶ್ ಅಮೈ, ಜತೆ ಕಾರ್ಯದರ್ಶಿ ಯೋಗೀಶ್ ಮಲ್ಲಿಗೆಮಾಡು, ಸದಸ್ಯರಾದ ಯಶೋಧಾ, ಡಾ.ಮಹೇಶ್ ಕೆ., ಕಾಲೇಜಿನ ಐಕ್ಯೂಎಸಿ ಸಂಚಾಲಕ ದೇವಿಪ್ರಸಾದ್ ಉಪಸ್ಥಿತರಿದ್ದರು. ಅಭಾಸಾಪ ಮಂಗಳೂರು ತಾಲೂಕು ಸಮಿತಿಯ ಉಪಾಧ್ಯಕ್ಷ ಚಂದ್ರಹಾಸ ಕಣಂತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ರತ್ನಾವತಿ ಬೈಕಾಡಿ ವಂದಿಸಿದರು. ಸಂಧ್ಯಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.