ಮಂಡ್ಯ ವಿವಿಯಲ್ಲೇ ಸಮ್ಮೇಳನ?: ನಗರದಲ್ಲೇ ನುಡಿಜಾತ್ರೆ ಆತಿಥ್ಯಕ್ಕೆ ಒಲವು

akhila bharatha sahitya sammelana mandya
Published on

ಕೆ.ಎನ್.ರಾಘವೇಂದ್ರ ಮಂಡ್ಯ
ನಾಡು, ನುಡಿ ವಿಚಾರದಲ್ಲಿ ಯಾವಾಗಲೂ ಒಂದೆಜ್ಜೆ ಮುಂದಿರುವ ಸಕ್ಕರೆನಾಡು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಸಜ್ಜಾಗಿದೆ. ಡಿ.20ರಿಂದ 22ರವರೆಗೆ ನಡೆಯಲಿರುವ ಐತಿಹಾಸಿಕ ನುಡಿಜಾತ್ರೆಗೆ ಮಂಡ್ಯ ವಿಶ್ವವಿದ್ಯಾನಿಲಯ ಆವರಣವೇ ಅಂತಿಮಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಮಾತ್ರವಲ್ಲದೆ ನಿರೀಕ್ಷೆಯಂತೆ 30 ಕೋಟಿ ರೂ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರದಿಂದ ಗ್ರೀನ್‌ಸಿಗ್ನಲ್ ಸಿಕ್ಕಿದೆ.
ಸಮ್ಮೇಳನಕ್ಕೆ ಜಾಗ ಒದಗಿಸುವುದೇ ದೊಡ್ಡ ಸವಾಲಾಗಿದೆ. ಕನಿಷ್ಟ 100 ಎಕರೆ ಜಾಗವಾದರೂ ಅಗತ್ಯವಿದೆ. ಈ ಕಾರಣಕ್ಕೆ ಸ್ಥಳಕ್ಕೆ ತಲಾಶ್ ಕೂಡ ನಡೆದಿದ್ದು, ಯಾವುದೂ ಅಂತಿಮಗೊಂಡಿಲ್ಲ. ಆದರೆ ಎಲ್ಲರಿಗೂ ಅನುಕೂಲವಾಗುವಂತೆ ಜತೆಗೆ ಸೌಲಭ್ಯ ಒದಗಿಸಲು ಸಾಧ್ಯವಾಗುವಂತೆ ಸಹಕಾರಿಯಾಗಲು ಮಂಡ್ಯ ವಿವಿಯಲ್ಲಿಯೇ ಆಯೋಜಿಸಲು ನಿರ್ಣಯಿಸಲಾಗಿದ್ದರೂ ಇನ್ನೂ ಅಂತಿಮವಾಗಿಲ್ಲ.
ಗುರುವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವರಾದ ಶಿವರಾಜ ತಂಗಡಗಿ ಹಾಗೂ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಮ್ಮೇಳನದ ಕುರಿತು ಹಲವು ವಿಷಯ ಚರ್ಚೆಯಾಗಿದೆ. ಅದರಲ್ಲಿ ಪ್ರಮುಖವಾಗಿ ಜಾಗದ ವಿಚಾರ ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪರಿಶೀಲನೆ ನಡೆಸಿರುವ ಶ್ರೀನಿವಾಸಪುರ ಗೇಟ್, ಚಿಕ್ಕಮಂಡ್ಯಗಿಂತಲೂ ಮಂಡ್ಯ ವಿವಿ ಆವರಣವೇ ಉತ್ತಮ. ಮಾತ್ರವಲ್ಲದೆ ಇಲ್ಲಿ ಆಯೋಜನೆ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವ ಸಲಹೆಯನ್ನು ಸಚಿವ ಚಲುವರಾಯಸ್ವಾಮಿ ನೀಡಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕೆ.ಎಂ.ಉದಯ್, ರಮೇಶ ಬಂಡಿಸಿದ್ದೇಗೌಡ, ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ಡಿಸಿ ಖಾತೆಗೆ ಅನುದಾನ
ಸಮ್ಮೇಳನಕ್ಕೆ 10 ಕೋಟಿ ರೂ ಎಂದು ಮೀಸಲಿಡಲಾಗಿತ್ತು. ಆದರೆ 30 ಕೋಟಿ ರೂಗಳ ಅವಶ್ಯಕತೆ ಇದೆ ಎನ್ನುವ ಪ್ರಸ್ತಾವನೆಗೆ ಸ್ಪಂದನೆ ಸಿಕ್ಕಿದೆ. ಅದರಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ 30 ಕೋಟಿ ರೂ ಅನುದಾನ ನೀಡಲಾಗುವುದು. ಈ ಮೊತ್ತದೊಳಗೆ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೆ ಪೂರ್ಣ ಅನುದಾನ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆಯಾಗಲಿದೆ. ಯಾವುದೇ ಕೆಲಸಕ್ಕೂ ಅಗತ್ಯವಿದ್ದರೂ ಡಿಸಿ ಮೂಲಕವೇ ಹಣ ಹಂಚಿಕೆಯಾಗಲಿದೆ. ಅಂತೆಯೇ ಯಾವ ಕಾರ್ಯಕ್ರಮಕ್ಕೆ ಎಷ್ಟು ಬೇಕೆಂದು ಪ್ರಸ್ತಾವನೆ ಸಲ್ಲಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಲಾಗಿದೆ.

9 ಲಕ್ಷ ಜನರ ನಿರೀಕ್ಷೆ
ಬರೋಬರಿ ಮೂರು ದಶಕದ ಬಳಿಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯಕ್ಕೆ ಒಲಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅದ್ಧೂರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ 25 ಸಮಿತಿ ರಚನೆ ಹಾಗೂ ಕವನ ಸಂಕಲನ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಅದರಂತೆ ಮೂರು ದಿನದ ನುಡಿಜಾತ್ರೆ 9 ಲಕ್ಷ ಜನರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.
ಉದ್ಘಾಟನಾ ಸಮಾರಂಭಕ್ಕೆ ಕನಿಷ್ಟ 50 ಸಾವಿರ ಜನ ಸೇರುವ ಸಾಧ್ಯತೆ ಇದೆ. ಆದ್ದರಿಂದ ಭವ್ಯವಾದ ವೇದಿಕೆ ಜತೆಗೆ ವ್ಯವಸ್ಥೆ ಅಚ್ಚುಕಟ್ಟಾಗಿ ಇರುವಂತೆ ಸಚಿವ ಚಲುವರಾಯಸ್ವಾಮಿ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಮಾತ್ರವಲ್ಲದೆ ಮೂರು ದಿನವೂ ಊಟದ ಸೌಕರ್ಯಕ್ಕೂ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಇನ್ನು ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಲಾತಂಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಲಾವಿದರ ತಂಡ ಬರಲಿದೆ.

ಪಿಎಂಎನ್ ಸಲಹೆಗೆ ಒಪ್ಪಿಗೆ
ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಿರಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಹತ್ವದ ಸಲಹೆ ನೀಡಿದ್ದಾರೆ. ಅಂದರೆ ಸಮ್ಮೇಳನಕ್ಕೆಂದು ಅಳವಡಿಸುವ ಬೃಹತ್ ಪೆಂಡಾಲ್ ಹಾಕುವ ಜವಾಬ್ದಾರಿಯನ್ನು ನೇರವಾಗಿ ಯಾರಿಗೂ ನೀಡುವುದು ಬೇಡ. ಬದಲಿಗೆ ಟೆಂಡರ್ ಆಹ್ವಾನಿಸಿ ನಿಯಮದಂತೆ ಯಾರಾದರೂ ಅವಕಾಶ ಪಡೆದುಕೊಳ್ಳಲಿ. ಇದರಿಂದ ಪಾರದರ್ಶಕತೆ ಇರಲಿದೆ ಎನ್ನುವ ನರೇಂದ್ರಸ್ವಾಮಿ ಸಲಹೆಗೆ ಒಪ್ಪಿಗೆ ಸೂಚಿಸಿ ಅನುಮೋದಿಸಲಾಗಿದೆ.

ಮೂರು ದಶಕದ ಬಳಿಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ನಮ್ಮ ಜಿಲ್ಲೆಗೆ ಸಿಕ್ಕಿದೆ. ಆದ್ದರಿಂದ ಈ ನುಡಿಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುತ್ತೇವೆ.ರವಿಕುಮಾರ್ ಗಣಿಗಮಂಡ್ಯ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net