ನ. 4,5 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಅಖಿಲ ಭಾರತ ಕೊಂಕಣಿ ಸಮ್ಮೇಳನ; ಅಧ್ಯಕ್ಷರಾಗಿ ಕಾದಂಬರಿಗಾರ್ತಿ ಹೇಮಾ ನಾಯ್ಕ ಆಯ್ಕೆ

mng-nov2-Hema Nayak
ಹೇಮಾ ನಾಯ್ಕ
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನ.4,5ರಂದು 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕಾದಂಬರಿಗಾರ್ತಿ ಹೇಮಾ ನಾಯ್ಕ ಆಯ್ಕೆಯಾಗಿದ್ದಾರೆ.

ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಪರಿಸರ ಸಂವಾದ, ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನ.4ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆ ನಡೆಯಲಿದ್ದು, ವಿದ್ವಾಂಸ ಉದಯನ್ ವಾಜಪೇಯಿ ‘ಸಾಹಿತ್ಯ ಮತ್ತು ಬದುಕು’ ಕುರಿತು ಶಿಖರೋಪನ್ಯಾಸ ನೀಡುವರು. 5ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ನಡೆಯಲಿದೆ. ಖ್ಯಾತ ಕನ್ನಡ ಸಾಹಿತಿ ಮಮತಾ ಜಿ.ಸಾಗರ ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್.ಎಂ.ಪೆರ್ನಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


4ರಂದು ಸಂಜೆ 5.30ಕ್ಕೆ ಡಾ.ಪುರುಷೋತ್ತಮ ಬಿಳಿಮಳೆ ಅಧ್ಯಕ್ಷತೆಯಲ್ಲಿ ‘ಸಮಕಾಲೀನ ಬರಹಗಾರಿಗೆ ಸವಾಲುಗಳು’ ಎಂಬ ವಿಚಾರದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಾದ ನಡೆಯಲಿದ್ದು, ಉದಯನ್ ವಾಜಪೇಯಿ ಮತ್ತು ಮಮತಾ ಜಿ.ಸಾಗರ ವಿಚಾರ ಮಂಡಿಸುವರು. ವಿವಿಧ ರಾಜ್ಯಗಳ 600 ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಬಹುಭಾಷಾ ಸಾಹಿತಿ ಹೇಮಾ
ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಹೇಮಾ ನಾಯ್ಕ ಕೊಂಕಣಿ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಕತೆ, ಕಾದಂಬರಿ, ರೇಡಿಯೋ ನಾಟಕಗಳನ್ನು ರಚಿಸಿರುವ ಇವರು, ಇಲ್ಲಿಯ ತನಕ ಎಂಟು ಪುಸ್ತಕಗಳನ್ನು ಪ್ರಕಟಿಸಿ, 10ಕ್ಕೂ ಅಧಿಕ ಕೃತಿಗಳನ್ನು ಅನುವಾದಿಸಿದ್ದಾರೆ.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ, ಉಪಾಧ್ಯಕ್ಷ ನಂದಗೋಪಾಲ ಶೆಣೈ, ಅಖಿಲ ಭಾರತೀಯ ಕೊಂಕಣಿ ಪರಿಷದ್ ಉಪಾಧ್ಯಕ್ಷ ಮೆಲ್ವಿನ್ ರೋಡ್ರಿಗಸ್, ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್ ನೊರೋನ್ಹಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net