ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಆ.12 ರಂದು ಪೊನ್ನಂಪೇಟೆಯಿಂದ ಗೋಣಿಕೊಪ್ಪಕ್ಕೆ ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಬೃಹತ್ ವಾಹನ ಜಾಥಾ ಆಯೋಜಿಸಲಾಗಿದೆ ಎಂದು ಪುತ್ತಾಮನೆ ಅನಿಲ್ ಪ್ರಸಾದ್ ತಿಳಿಸಿದ್ದಾರೆ.
ಸುಮಾರು 400ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ದೇಶಭಕ್ತರು ಅಖಂಡ ಭಾರತ ಸಂಕಲ್ಪದ ಸಂದೇಶವನ್ನು ಸಾರಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಬೆಳಗ್ಗೆ 11.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ವಿಎಚ್‌ಪಿ ನಿಕಟಪೂರ್ವ ಪ್ರಾಂತ ಗೋರಕ್ಷಕ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಆಗಮಿಸಲಿದ್ದಾರೆ. ನಿವೃತ್ತ ಕ್ಯಾಪ್ಟನ್ ಮಲ್ಲೇಂಗಡ ಎಂ.ಪೂಣಚ್ಚ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಪ್ರಮುಖ್ ಅಲ್ಲುಮಾಡ ಶರತ್ ಪೆಮ್ಮಯ್ಯ, ತಾಲೂಕು ಸಂಯೋಜಕ ಸುಳ್ಳಿಮಾಡ ಪಿ. ಸಂಪತ್, ಮುಳ್ಳೇಂಗಡ ಸುಖೇಶ್, ಅಲ್ಲುಮಾಡ ತಿಮ್ಮಯ್ಯ ಇದ್ದರು.