ಆಕಾಶ ಮಠಪತಿ ಕೊಲೆಯೋ? ಸಹಜ ಸಾವೋ? ಶಂಕಿತ 6 ಜನರ ವಿರುದ್ಧ ದೂರು

Aksha Mathapati
Published on

ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರನ ಮೃತದೇಹವು ಇಲ್ಲಿಯ ಲೋಹಿಯಾನಗರದಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ಆದರೆ, ಇದು ಕೊಲೆಯೋ ಅಥವಾ ಮದ್ಯದ ಅಮಲಿನಲ್ಲಿ ಬಿದ್ದು ಮೃತಪಟ್ಟಿದ್ದಾನೋ ಎಂಬುದು ದೃಢಪಡಬೇಕಿದೆ.

ಮೃತ ಯುವಕನ ಹೆಸರು ಆಕಾಶ ಮಠಪತಿ (30). ಸಂಜೆ ವೇಳೆ ಲೋಹಿಯಾನಗರದಲ್ಲಿ ಮೃತ ದೇಹ ಪತ್ತೆಯಾಗಿದೆ. ಯಾರೋ ನೋಡಿ ಕುಟುಂಬದವರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಕಿಮ್ಸ್​ಗೆ ರವಾನಿಸಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಡಿಸಿಪಿ ಕುಶಲ್ ಚೌಕ್ಸೆ, ಪೊಲೀಸ್ ಇನ್ಸ್​ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ಘಟನೆ ವಿವರ:

ಮದ್ಯ ಕುಡಿಸಿ ಹತ್ಯೆ ಮಾಡಿರಬಹುದು ಎಂದು ಶಂಕಿಸಿರುವ ಆಕಾಶ ತಂದೆ ಶೇಖರಯ್ಯ ಮಠಪತಿ, ಶಂಕಿತ 6 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಪಡೆದಿರುವ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಂಜೆ ವೇಳೆ ಮದ್ಯ ಪಾರ್ಟಿ ಈ ಭಾಗದಲ್ಲಿ ಜೋರಾಗಿ ನಡೆಯುತ್ತಿರುತ್ತದೆ. ಗುಂಪು ಸೇರಿರುವವರೇ ಆಕಾಶನನ್ನು ಹತ್ಯೆ ಮಾಡಿರಬಹುದು ಎಂದು ಕುಟುಂಬದವರು ಶಂಕಿಸಿದ್ದಾರೆ. ಪ್ರೀತಿ ವಿಷಯಕ್ಕೂ ಹತ್ಯೆ ನಡೆದಿರಬಹುದು ಎಂಬ ಶಂಕೆಯೂ ಹರಿದಾಡುತ್ತಿದೆ. ಮೃತ ದೇಹವು ಕಿಮ್ಸ್​ನಲ್ಲಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.

ಕೊಲೆಗೆ ಸಂಬಂಧಿಸಿದಂತೆ ರಾಹುಲ್, ಅರ್ಜುನ, ಸಂಜು ಹಾಗೂ ವಿನಾಯಕ ಎಂಬುವವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ಗಂಟೆ ಮೇಲೆ ಆಕಾಶನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಕತ್ತಲಲ್ಲಿ ಕರೆದುಕೊಂಡು ಹೋಗಿ ನನ್ನ ಮಗನನ್ನು ಮುಗಿಸಿದ್ದಾರೆ. ಪೊಲೀಸರ ಮುಂದೆ ಹೆಸರು ಹೇಳಿದ್ದೇವೆ. ಆಕಾಶನ ಹಣೆಗೆ ಕಚ್ಚು ಬಿದ್ದಿದೆ. -ಅನ್ನಪೂರ್ಣ ಮಠಪತಿ, ಆಕಾಶ ತಾಯಿ ಹಣೆಯ ಮೇಲೆ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಂಕಿತ 6 ಜನರ ವಿರುದ್ಧ ಆಕಾಶ ತಂದೆ ದೂರು ಕೊಟ್ಟಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಕುರಿತು ಮತ್ತಷ್ಟು ತನಿಖೆ ಚುರುಕುಗೊಳಿಸಲಾಗುವುದು. -ರೇಣುಕಾ ಸುಕುಮಾರ, ಹು-ಧಾ ಪೊಲೀಸ್ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net