

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿಎ ವಿದ್ಯಾರ್ಥಿ ಹಾಗೂ ಎನ್‌ಸಿಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಆಕಾಶ ಸತೀಶ್ ಗುಡಗೇನಟ್ಟಿ ಕೇರಳದ ತಿರುವನಂತಪುರನಲ್ಲಿ ಶುಕ್ರವಾರ ಜರುಗಿದ 33ನೇ ಜಿ.ವಿ. ಮವಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಹಾಗೂ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಶೂಟಿಂಗ್‌ದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಶೂಟಿಂಗ್‌ದಲ್ಲಿ 600 ಅಂಕಗಳಲ್ಲಿ 535 ಅಂಕ ಪಡೆದು ಚಿನ್ನದ ಪದಕ ಪಡೆದಿದ್ದಾನೆ. ಭಾರತಾದ್ಯಂತದ 18 ಯುವ ಶೂಟರ್‌ಗಳು ಅಂತಿಮ ಹಂತದಲ್ಲಿ ಸ್ಪರ್ಧಿಸಿದ್ದರು. ಈ ಕಠಿಣ ಶೂಟಿಂಗ್ ಪಂದ್ಯಾವಳಿಯಲ್ಲಿ ಆಕಾಶ ಗುಡಗೇನಟ್ಟಿ ಅವರು ಅದ್ಭುತ್ ಶೂಟಿಂಗ್ ಕೌಶಲ ತೋರಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರೆ, ಜೂನಿಯರ್ ವಿಭಾಗದಲ್ಲಿಯೂ ಅಷ್ಟೇ ಕಠಿಣ ಸ್ಪರ್ಧೆ ಎದುರಿಸಿ ಆಕಾಶ ಮತ್ತೊಂದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಎನ್‌ಸಿಸಿ ಕೆಡೆಟ್ ಆಗಿರುವ ಕೆಡೆಟ್ ಆಕಾಶ ಮವಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಫ್ ಜೂನಿಯರ್ ಹಾಗೂ ಸೀನಿಯರ್ ಎರಡು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ, ಈ ಸಾಧನೆ ಮಾಡಿದ ರಾಜ್ಯದ ಪ್ರಥಮ ಎನ್‌ಸಿಸಿ ಕೆಡೆಟ್ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ.
ಜುಲೈದಲ್ಲಿ ತಮಿಳುನಾಡಿನಲ್ಲಿ ಜರುಗಿದ ನವದೆಹಲಿ ಡಿಜಿಎನ್‌ಸಿಸಿ ಶೂಟಿಂಗ್ ಚಾಂಪಿಯನಶಿಫ್‌ದಲ್ಲಿಯೂ ಅಗ್ರ ಶ್ರೇಯಾಂಕ ಪಡೆದುಕೊಂಡು 33ನೇ ಜಿ.ವಿ.ಮವಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಫ್‌ಗೆ ಆಯ್ಕೆಯಾಗಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಯ ಈ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಪ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ, 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಲೆಫ್ಟನಂಟ್ ಕರ್ನಲ್ ಸುನೀಲ ದಾಗರ, ಎಡಮ್ ಆಫೀಸರ್ ಲೆಫ್ಟನಂಟ್ ಕರ್ನಲ್ ಸಿದ್ದಾರ್ಥ ರೆಡೂ ಶಂಕರ ಯಾದವ್, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ, ಕೆಎಲ್‌ಇ ಜಂಟಿ ಕಾರ್ಯದರ್ಶಿ ಡಾ. ಪ್ರಕಾಶ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್. ಮೇಲಿನಮನಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.