ಗುಣಮಟ್ಟದ ಸಾಹಿತ್ಯಕ್ಕೆ ಅಪಾರ ಅಧ್ಯಯನ ಅಗತ್ಯ: ಡಾ. ಪವಿತ್ರಾ

udp-2-pavitra
Published on

ಉಡುಪಿ: ಸಾಹಿತ್ಯಕ್ಕೆ ಪ್ರತಿಭೆ ಮಾತ್ರ ಸಾಲದು. ಅಪಾರ ಅಧ್ಯಯನವೂ ಅಗತ್ಯ. ಇದರಿಂದ ಉತ್ತಮ ಗುಣಮಟ್ಟದ ಕೃತಿಗಳು ಹೊರಬರಲು ಸಾಧ್ಯವಿದೆ. ಸಾಹಿತಿಗಳಿಗೆ ಪರಿಶ್ರಮ, ಶಿಸ್ತು ಅವಶ್ಯ ಎಂದು ಮನೋವೈದ್ಯೆ, ಸಾಹಿತಿ ಡಾ.ಕೆ.ಎಸ್. ಪವಿತ್ರಾ ಹೇಳಿದರು.

ಭಾನುವಾರ ಎಂಜಿಎಂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಡಾ.ಉಪ್ಪಂಗಳ ರಾಮಭಟ್ಟ ಮತ್ತು ಶಂಕರಿ ಆರ್. ಭಟ್ಟರ ‘ಅಕಲಂಕ ದತ್ತಿ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ವ್ಯಾಕರಣ ಗ್ರಂಥಗಳು ಹೆಚ್ಚು ಪ್ರಸಿದ್ಧಿ ಪಡೆದಿಲ್ಲ. ಕನ್ನಡದಲ್ಲಿ ಮೊದಲ ವ್ಯಾಕರಕರಣ ಮೀಮಾಂಸೆ ರಚಿಸಿದ ಜೈನ ಯತಿ ಭಟ್ಕಳಾಂಕ ಹೆಸರಿನಲ್ಲಿ ನೀಡಿರುವ ಅಕಳಂಕ ಪ್ರಶಸ್ತಿ ಕಳಂಕ ರಹಿತ ಕನ್ನಡ ಕೆಲಸಕ್ಕೆ ದಿಕ್ಸೂಚಿಯಾಗಿದೆ. ಆತ್ಮರತಿ ಹೆಚ್ಚುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಮತ್ತೊಬ್ಬ ಸಾಹಿತಿಯ ಪ್ರತಿಭೆ ಗುರುತಿಸಿ ಸನ್ಮಾನಿಸುವ ಡಾ.ಉಪ್ಪಂಗಳ ರಾಮಭಟ್ಟರ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಪ್ರಶಸ್ತಿ ಪ್ರದಾನ ಮಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉದ್ಘಾಟಿಸಿದರು. ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಉಪ್ಪಂಗಳ ರಾಮಭಟ್ ಅವರ ಪತ್ನಿ ಶಂಕರಿ, ಕಸಾಪ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಬ್ರಹ್ಮಾವರ ತಾ.ಅಧ್ಯಕ್ಷ ರಾಮಚಂದ್ರ ಐತಾಳ್ ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಾಡಿ ಸ್ವಾಗತಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ. ವಂದಿಸಿದರು. ಬೈಂದೂರು ತಾಲೂಕು ಕಸಪಾ ಅಧ್ಯಕ್ಷ ರಘು ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net