

ಉಡುಪಿ: ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಯುವ ಜನರು ಅದನ್ನು ಅರ್ಥೈಸಿಕೊಂಡು ಪಾಲಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹೇಳಿದರು.
ಶುಕ್ರವಾರ ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಯುವ ಜನತೆಗೆ ಮಾದರಿಯಾಗಿದ್ದು, ಪ್ರತಿಯೊಬ್ಬರು ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಗುರಿ ಹೊಂದುವುದು ಮುಖ್ಯವಾಗಿದ್ದು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಗುರಿಯನ್ನು ತಲುಪುವ ಕಡೆ ಗಮನಹರಿಸಬೇಕು. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಜವಾಬ್ದಾರಿ ಇದೆ. ಯಾವುದೇ ಕೆಲಸವನ್ನು ಕೈಗೊಂಡರು ಅದನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.
ಭಾರತೀಯ ರೆಡ್ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿದೆ. ಅವರ ಪುಸ್ತಕಗಳನ್ನು ಓದಿ ಅವರಲ್ಲಿರುವ ಅಧ್ಯಾತ್ಮ, ನಿಷ್ಠೆ, ದೇಶಭಕ್ತಿ ಹಾಗೂ ಮಾನವೀಯತೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಚಿಂತಕ ಡಾ. ಪ್ರಸಾದ್ ರಾವ್ ಉಪನ್ಯಾಸ ನೀಡಿ, ಭಾರತೀಯ ಸಂವಿಧಾನದ ಮೌಲ್ಯಗಳನ್ನು ವಿವೇಕಾನಂದರ ಚಿಂತನೆಯಲ್ಲಿ ಕಾಣಬಹುದು. ವಿವೇಕಾನಂದ, ಗಾಂಧೀಜಿ ಮತ್ತು ಅಂಬೇಡ್ಕರವರು ಭಾರತೀಯ ಆಧುನಿಕ ಚಿಂತನೆಯ ಪ್ರತಿಕ. ದೇಶದಲ್ಲಿ ಧರ್ಮಗಳು ದೇಹ ಹಾಗೂ ಆತ್ಮದಂತೆ ಸಮ್ಮಿಲನಗೊಂಡಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಕಿರಣ್, ಡೀನ್ ಪ್ರೊ. ಶ್ರೀಧರ ಪ್ರಸಾದ್ ರೆಡ್ಕ್ರಾಸ್ ಖಜಾಂಚಿ ರಮಾದೇವಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನ ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಎನ್.ಎಸ್.ಎಸ್ ಅಧಿಕಾರಿ ವಿದ್ಯಾ ಡಿ. ವಂದಿಸಿದರು.