

ಉಡುಪಿ: ಅಜ್ಜರಕಾಡು ವಾರ್ಡಿನ ಭುಜಂಗ ಪಾರ್ಕ್ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಸಮರ್ಪಕ ದಾರಿ ದೀಪ, ಪಾರ್ಕಿನ ಸ್ವಚ್ಛತೆ, ಪ್ರವಾಸೋದ್ಯಮ ಇಲಾಖೆ ಅನುದಾನದಿಂದ ಪ್ರಗತಿಯಲ್ಲಿರುವ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಶಾಸಕ ಯಶ್ ಪಾಲ್ ಸುವರ್ಣ ನಿರ್ದೇಶನ ನೀಡಿದರು.
ಸೋಮವಾರ ಪಾರ್ಕ್ ಅವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಯುವಿಹಾರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕ ಅಳವಡಿಕೆ ಹಾಗೂ ಪಾರ್ಕಿನ ರಂಗಮಂದಿರ ಹಾಗೂ ಮಕ್ಕಳ ಕ್ರೀಡಾ ಸಲಕರಣೆಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಅಜ್ಜರಕಾಡು ವಾರ್ಡ್ ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್, ನಗರಸಭೆಯ ಎ. ಇ. ಇ. ದುರ್ಗಾ ಪ್ರಸಾದ್, ಇಂಜಿನಿಯರ್ ಕಾರ್ತಿಕ್ ಉಪಸ್ಥಿತರಿದ್ದರು.