ನ.1ರಿಂದ ಬಾಲಕ, ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟ

udp-30-yashpal
Published on

ಉಡುಪಿ: ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸೈಂಟ್​ ಸಿಸಿಲೀಸ್​ ಪ್ರೌಢಶಾಲೆ ಆಶ್ರಯದಲ್ಲಿ 14 ರ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟ ನ.1 ರಿಂದ ನ. 3ರವರೆಗೆ ಅಜ್ಜರಕಾಡಿನ ಜಿಲ್ಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1ರಂದು 3 ಗಂಟೆಗೆ ಉಡುಪಿ ಶೋಕಮಾತ ಇಗರ್ಜಿಯಿಂದ ಕೋರ್ಟ್​ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಮೆರವಣಿಗೆಯಲ್ಲಿ ಕ್ರೀಡಾಪಟುಗಳು ಮೈದಾನಕ್ಕೆ ಆಗಮಿಸಲಿದ್ದಾರೆ. ಸಾಯಂಕಾಲ 4.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಂದನೆ ಸ್ವೀಕರಿಸಲಿದ್ದಾರೆ ಎಂದರು.

ಅಂತರಾಷ್ಟ್ರಿಯ ಕ್ರೀಡಾಪಟು ಮಿಜೋ ಚಾಕೋ, ಶಾಲಾ ಶಿಕ್ಷಣ ಸಚಿವ ಎಸ್​.ಮಧು ಬಂಗಾರಪ್ಪ, ಯುವಜನ ಸೇವೆ, ಕ್ರೀಡಾ ಸಚಿವ ಬಿ.ನಾಗೇಂದ್ರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್​ ಹೆಗ್ಡೆ, ಶಿವಮೊಗ್ಗ - ಬೈಂದೂರು ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್​ ಸದಸ್ಯರಾದ ಕೋಟ ಶ್ರೀನಿವಾಸ್​ ಪೂಜಾರಿ, ಎಸ್​.ಎಲ್​ ಭೋಜೆಗೌಡ, ತೇಜಸ್ವಿನಿ ಗೌಡ, ಮಂಜುನಾಥ್​ ಭಂಡಾರಿ, ಶಾಸಕರಾದ ಗುರುರಾಜ್​ ಗಂಟಿಹೊಳೆ, ಕಿರಣ್​ ಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಸುನೀಲ್​ ಕುಮಾರ್​ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಕ್ರೀಡಾಕೂಟದಲ್ಲಿ 35 ಶೈಕ್ಷಣಿಕ ಜಿಲ್ಲೆಗಳು ಹಾಗು 2 ಕ್ರೀಡಾ ವಸತಿ ಶಾಲೆಗಳಿಂದ 1,800 ವಿದ್ಯಾರ್ಥಿಗಳು, 250 ತಂಡದ ವ್ಯವಸ್ಥಾಪಕರು, 250 ಕ್ರೀಡಾಧಿಕಾರಿಗಳು ಹಾಗು 200 ಸ್ವಯಂ ಸೇವಕರು, ಕ್ರೀಡಾ ಆಯೋಜಕರು ಒಳಗೊಂಡಂತೆ 2,500 ಮಂದಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ 17 ಸ್ಥಳಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಲಕಿಯರು ವಾಸವಿರುವ ಸ್ಥಳಗಳಲ್ಲಿ ಪೋಲಿಸ್​ ಭದ್ರತೆಯನ್ನು, ರೋವರ್​ ಮತ್ತು ರೇಂರ್ಜಸ್​, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಇತರೆ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಸ್ವಾಗತಿಸಲು ಇಂದ್ರಾಳಿಯ ರೈಲು ನಿಲ್ದಾಣ, ಬನ್ನಂಜೆಯ ಕೆ.ಎಸ್​.ಆರ್​.ಟಿ.ಸಿ ಬಸ್​ ನಿಲ್ದಾಣದಲ್ಲಿ ಸ್ವಾಗತ ಕೌಂಟರ್​ ಗಳನ್ನು ತೆರೆಯಲಾಗುವುದು. ಕ್ರೀಡಾಪಟುಗಳನ್ನು ಕರೆತರಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಜಿಲ್ಲಾಸ್ಪತ್ರೆಯಿಂದ ಪ್ರಥಮ ಚಿಕಿತ್ಸೆ ಘಟಕ, ಆಂಬುಲೆನ್ಸ್​ ವ್ಯವಸ್ಥೆ, ಅಗ್ನಿಶಾಮಕ ದಳ ಹಾಗು ಹೆಚ್ಚುವರಿ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ಗೋವಿಂದ ಕಲ್ಯಾಣ ಮಂಟಪದಲ್ಲಿ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಊಟಕ್ಕೆ ಏಕೀಕೃತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಡಿಪಿಐ ಗಣಪತಿ, ಸಂಸ್ಥೆಯ ಪಿ.ಟಿ.ಎ ಉಪಾಧ್ಯಕ್ಷ ಸೋಹೆಲ್​ ಆಮೀನ್​, ಸೈಂಟ್​ ಸಿಸಿಲೀಸ್​ ಸಂಸ್ಥೆ ಮುಖ್ಯ ಶಿಕ್ಷಕಿ ಪ್ರೀತಿ ಜೆ.ಕ್ರಾಸ್ತಾ, ಸಂಸ್ಥೆಯ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ, ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್​ ಕುಮಾರ್​, ಪ್ರಶಾಂತ್​ ಜತ್ತನ್​, ನಿರ್ಮಲಾ, ರೀಟಾ ಲೋಬೋ, ಪ್ರಹ್ಲಾದ್​ ಬಲ್ಲಾಳ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net