

ಮಡಿಕೇರಿ:
೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾವೀರ ಚಕ್ರ (ಮರಣೋತ್ತರ) ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ೫೮ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಡಿಕೇರಿಯಲ್ಲಿ ಗುರುವಾರ ನಡೆಯಿತು. ಕೊಡವ ಮಕ್ಕಡ ಕೂಟ ಮತ್ತು ಅಜ್ಜಮಾಡ ಕುಟುಂಬಸ್ಥರ ಸಹಯೋಗದಲ್ಲಿ ನಗರದ ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಜನಪ್ರತಿನಿಧಿಗಳು, ನಿವೃತ್ತ ಯೋಧರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ದೇವಯ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಏರ್ ಮಾರ್ಷಲ್ (ನಿವೃತ್ತ) ಕೊಡಂದೇರ ನಂದಾ ಕಾರ್ಯಪ್ಪ, ವೀರ ಸೇನಾನಿ ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ಅವರು ದೇಶ ರಕ್ಷಣೆಯ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅಜ್ಜಮಾಡ ಬಿ.ದೇವಯ್ಯ ಹಾಗೂ ಕರ್ನಲ್ ಪೊನ್ನಚೆಟ್ಟಿರ ಗಣಪತಿ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ದೊರೆತ್ತಿದೆ. ಆ ಮೂಲಕ ಕೊಡಗು ಜಿಲ್ಲೆಗೆ ಎರಡು ಮಹಾವೀರ ಚಕ್ರ ಪ್ರಶಸ್ತಿ ದೊರೆತಂತಾಗಿದೆ. ಇಬ್ಬರು ಯೋಧರು ದಕ್ಷತೆ ಮತ್ತು ಶೌರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ ಆದರ್ಶವನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶಸೇವೆಗೆ ಮುಂದಾಗಬೇಕು ಎಂದರು.
ಅಜ್ಜಮಾಡ ಬಿ.ದೇವಯ್ಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಕಟ್ಟಿ ಮಂದಯ್ಯ ಮಾತನಾಡಿ ದೇಶ ಕಂಡ ಅಪ್ರತಿಮ ವೀರ ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ಅವರ ೫೮ನೇ ಪುಣ್ಯಸ್ಮರಣೆ ನಡೆಸುತ್ತಿರುವುಉ ಹೆಮ್ಮೆಯ ವಿಚಾರ. ತಮ್ಮ ೩೨ನೇ ವಯಸ್ಸಿನಲ್ಲೇ ಅಜ್ಜಮಾಡ ಬಿ.ದೇವಯ್ಯ ಅವರು ಕುಟುಂಬದ ಬಗ್ಗೆ ಚಿಂತಿಸದೆ ದೇಶದ ರಕ್ಷಣೆಗಾಗಿ ಜೀವ ನೀಡಿದ್ದಾರೆ. ಅವರ ತ್ಯಾಗ ಬಲಿದಾನ ಅವಿಸ್ಮರಣೀಯ, ಮಹಾವೀರ ಚಕ್ರ ಪುರಸ್ಕೃತರಾಗಿರುವ ದೇವಯ್ಯ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.
ವಾಯುಪಡೆಯ ನಿವೃತ್ತ ಯೋಧ ಬಾಳೆಯಡ ಶಂಭು ಮಾತನಾಡಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ಅಜ್ಜಮಾಡ ಕುಟುಂಬದ ಖಜಾಂಚಿ ಚಂಗಪ್ಪ, ಕುಟುಂಬದ ಪ್ರಮುಖರಾದ ಬೆಳ್ಯಪ್ಪ, ಕಾರ್ಯಪ್ಪ, ಮಹೇಶ್, ಬಾಲಕೃಷ್ಣ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರೀರ ಕರುಣ್ ಕಾಳಯ್ಯ ಮತ್ತಿತರರು ಇದ್ದರು.