ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಅಜಿತ್ ಕುಮಾರ್ ರೈ ಅಮಾನತು

Ajith Kumar Rai
ಅಜಿತ್ ಕುಮಾರ್ ರೈ
Published on


ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಕೆಆರ್ ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್‌ ಕುಮಾರ್ ರೈ ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1957 ರ ನಿಯಮ 10(1)(ಎ)(ಎ) ಮತ್ತು 10(2)(ಎ) ಅನ್ವಯ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.

ಅಜಿತ್​ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದರು. 4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್‌ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದು, ಎಲ್ಲ ಕಾರಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ. ಆದರೆ ಇದ್ಯಾವುದಕ್ಕೂ ಅಜಿತ್​ ರೈ ಲೆಕ್ಕ ಕೊಡುತ್ತಿಲ್ಲ ಎನ್ನಲಾಗಿದೆ. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿವೆ. ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net