

ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಒತ್ತಾಯಿಸಿ ರಸ್ತೆಯಲ್ಲಿ ಗಿಡ ನೆಟ್ಟು ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನೇತ್ರಾವತಿ ಸ್ನಾನ ಘಟ್ಟದ ಸಮೀಪ ಸಾರ್ವಜನಿಕರು ಪ್ರತಿಭಟನೆಗೆ ಮುಂದಾದ ವೇಳೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸರಾವ್, ಅಭಿವೃದ್ಧಿ ಅಧಿಕಾರಿ ದಿನೇಶ್, ದೇವಿ ಪ್ರಸಾದ್, ಗ್ರಾ.ಪಂ. ಸದಸ್ಯರಾದ ಚಂದನ್ ಪ್ರಸಾದ್ ಕಾಮತ್, ರವಿ ಕುಮಾರ್, ಸುಧಾಕರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಈ ರಸ್ತೆಯಲ್ಲಿ ಮೋರಿಯೊಂದು ಸಂಪೂರ್ಣ ಕುಸಿದು ಹೋಗುವ ಹಂತದಲ್ಲಿದ್ದು ಅದನ್ನು ಕೂಡಲೇ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ರಸ್ತೆ ಬದಿಯಲ್ಲಿ ಚರಂಡಿ ತೆಗೆಯದೆ ಇರುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿದೆ ಎಂದರು. ಈ ಬಗ್ಗೆ ಉತ್ತರಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಉಪಾಧ್ಯಕ್ಷರು ಹಾಗೂ ಸದಸ್ಯರು ಕುಸಿಯುವ ಸ್ಥಿತಿಯಲ್ಲಿರುವ ಮೋರಿಯನ್ನು ಗ್ರಾ.ಪಂ. ವತಿಯಿಂದ ಕೂಡಲೇ ದುರಸ್ತಿ ಮಾಡಿಸುವುದಾಗಿ ತಿಳಿಸಿದರು. ಉಳಿದಂತೆ ರಸ್ತೆ ಮರುಡಾಂಬರೀಕರಣಕ್ಕೆ ಗ್ರಾ.ಪಂ.ನಲ್ಲಿ ಅನುದಾನ ಕೊರತೆಯಿದೆ. ಮಳೆ ಹಾನಿಯಲ್ಲಿ ಈ ರಸ್ತೆಗೆ ಅನುದಾನ ಒದಗಿಸುವಂತೆ ಈಗಾಗಲೇ ಸರ್ಕಾರಕ್ಕೆ ಬರೆದುಕೊಳ್ಳಲಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ರಸ್ತೆಯ ಅಗತ್ಯದ ಬಗ್ಗೆ ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಗೆ ಕಳುಹಿಸುವುದಾಗಿ ತಿಳಿಸಿದರು. ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಯಿತು.
ಸ್ಥಳೀಯ ಗ್ರಾಮಸ್ಥರಾದ ವಸಂತ ಸುವರ್ಣ, ಸಿದ್ದಿಕ್ ಅಜಿಕುರಿ, ಹಕ್ಕೀಂ ಅಜಿಕುರಿ, ಸಂದೇಶ್ ರಾವ್ ಹಾಗೂ ಇತರರು ಜನರ ಪರವಾಗಿ ಅಧಿಕಾರಿಗಳ ಗಮನ ಸೆಳೆದರು.