

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ’ಶ್ರೀ ಆಂಜನೇಯ’ ಸುಮಾರು ೨೫೦ ವರ್ಷಗಳಿಂದ ನಗರದ ಬ್ರಾಹ್ಮಣರ ಬೀದಿಯಲ್ಲಿ ನೆಲೆ ನಿಂತಿದ್ದಾನೆ.
ಧಾರ್ಮಿಕ ಧತ್ತಿ ಇಲಾಖೆಗೆ ಸೇರಿದ ಶ್ರೀ ಆಂಜನೇಯ ದೇವಸ್ಥಾನವನ್ನು ಆಗಿನ ಲಿಂಗರಾಜೇಂದ್ರ ರಾಜನು ತನ್ನ ಸೈನಿಕರಿಗೆ ಯುದ್ಧ ಹಾಗೂ ಶಸ್ತ್ರಭ್ಯಾಸಕ್ಕೆ ತರಬೇತಿ ನೀಡುವ ದೃಷ್ಠಿಯಿಂದ ಸ್ಥಾಪಿಸಿದ್ದ. ಕಾರಣ, ಆಂಜನೇಯನ್ನು ಹೊಲಿಸಿಕೊಂಡರೆ ಎಲ್ಲವು ಸಾಧ್ಯ ಎಂಬ ನಂಬಿಕೆಯಿಂದ ಲಿಂಗರಾಜ ಆಂಜನೇಯನನ್ನು ಮುಂದಿರಿಸಿ, ಸೈನಿಕರಿಗೆ ಯುಧ್ಧ ತರಬೇತಿಗಳನ್ನು ನೀಡುತ್ತಿದ್ದ. ಅಷ್ಟೆ ಅಲ್ಲದೆ ಯಾವುದಾದರೂ ಯುದ್ಧಗಳಿಗೆ ಹೋಗುವ ಮುನ್ನ ಆಂಜನೇಯನಿಗೆ ಶಸ್ತ್ರಪೂಜೆಯನ್ನು ಮಾಡಿ ಹೂಗುತ್ತಿದ್ದನಂತೆ ಎಂದು ದೇವಾಲಯದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್ ಹೇಳುತ್ತಾರೆ.
ಪೂರ್ವದಿಕ್ಕಿನಿಂದ ಉತ್ತರಕ್ಕೆ ಪ್ರತಿಷ್ಠಾಪನೆ: ರಾಜರ ಕಾಲದಲ್ಲಿ ಪೂರ್ವ ದಿಕ್ಕಿಗೆ ಮುಖಮಾಡಿದ್ದ ಆಂಜನೇಯನನ್ನು ಉತ್ತರಕ್ಕೆ ದಿಕ್ಕಿಗೆ ಪ್ರತಿಷ್ಠಾಪನೆ ಮಾಡಲಾಯಿತು. ಏಕೆಂದರೆ, ಹಿಂದು ಶಾಸ್ತ್ರದಲ್ಲಿ ಉತ್ತರ ದಿಕ್ಕಿಗೆ ದೇವಾಲಯ ಇದ್ದಲ್ಲಿ ಅಭಿವೃದ್ಧಿಯ ಸಂಕೇತ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಆಂಜನೇಯ ಈಶ್ವರನ ಸೇವಕ. ಸೇವಕ(ಆಂಜನೇಯ) ಈಶ್ವರನಿಗೆ(ಓಂಕಾರೇಶ್ವರ ದೇವಾಲಯ) ಬೆನ್ನು ತೋರಿಸಿಕೊಂಡು ನಿಂತರೆ ಅಭಿವೃದ್ಧಿ ಕಾಣುವುದಿಲ್ಲ ಎಂಬ ದೃಷ್ಠಿಯಿಂದ ಆಂಜನೇಯನನ್ನು ಪೂರ್ವ ದಿಕ್ಕಿನಿಂದ ಉತ್ತರ ದಿಕ್ಕಿಗೆ ೨೦೧೬ರಲ್ಲಿ ಸುಮಾರು ೬೦ಲಕ್ಷ ವೆಚ್ಚದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
೨೦೧೬ರಲ್ಲಿ ಜೀಣೋಧ್ಧಾರ: ರಾಜರ ಆಳ್ವಿಕೆ ನಂತರ ದೇವಸ್ಥಾನ ಮಳೆಗಾಲದಲ್ಲಿ ಸೋರಿಕಕೊಂಡು ಬೀಳುವ ಪರಿಸ್ಥಿತಿಯಲ್ಲಿತ್ತು. ನಂತರದ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸುಮಾರು ರೂ.೪೦ ಲಕ್ಷ ನೀಡಿತ್ತು. ಇದರೊಂದಿಗೆ ಭಕ್ತಾಧಿಗಳು, ಸಾರ್ವಜನಿಕರ ನೀಡಿದ ಹಣದಿಂದ ೨೦೧೬ರಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಗಳೊಂದಿಗೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು.
ಭಕ್ತರ ಇಚ್ಚೆ ಪೂರೈಕೆ: ಮಕ್ಕಳ ವಿದ್ಯಾಭ್ಯಾಸ ಹಾಗು ತಮ್ಮ ಆರೋಗ್ಯದ ದೃಷ್ಠಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಶನಿದೆಸೆ ಇರುವವರು ದೋಷ ನಿವಾರಣೆಗಾಗಿ ಪೂಜೆ ಸಲ್ಲಿಸುತ್ತಾರೆ. ಕೆಲವು ಭಕ್ತರು ತಮ್ಮ ಇಚ್ಚೆ ಈಡೇರುವಂತೆ ಆಂಜನೇಯನಿಗೆ ಪ್ರಾರ್ಥಿಸಿ ಹರಕೆ ಮಾಡಿದರೆ ಬೇಡಿಕೆ ಇಲ್ಲಿ ಈಡೇರುತ್ತದೆ. ಹಾಗೂ ವಿದ್ಯಾರ್ಥಿಗಳು, ಜ್ಞಾನಿಗಳು ತಮ್ಮ ಇಚ್ಚೆಯನ್ನು ಇಲ್ಲಿ ಪೂರೈಸಿಕೊಳ್ಳಬಹುದು ಎಂದು ಸಂಪತ್ ಕುಮಾರ್ ಹೇಳುತ್ತಾರೆ.
ಗರಡಿ ಮನೆಯಾಗಿದ್ದ ಆಂಜನೇಯ ದೇವಸ್ಥಾನ
ಸುಮಾರು ೩೦೦ ವರ್ಷಗಳ ಹಿಂದೆ ಲಿಂಗರಾಜೇಂದ್ರ ರಾಜನಿಗೆ ಅರಮನೆ ಮಡಿಕೇರಿಯಲ್ಲಿತ್ತು(ಈಗಿನ ಕೋಟೆ). ಆದರೆ ಸೈನಿಕರಿಗೆ ಯುದ್ಧ, ಶಸ್ತ್ರಭ್ಯಾಸ ಮಾಡಲು ಆಂಜನೇಯ ಪ್ರಮುಖನಾದ ಹಿನ್ನೆಲೆ ಲಿಂಗರಾಜೇಂದ್ರನು ದೇವಸ್ಥಾನವಿದ್ದ ಸ್ಥಳದಲ್ಲಿ ತರಭೇತಿ ಆರಂಭಿಸಿದ್ದನು. ನಂತರ ಯುದ್ಧದ ಸಂದರ್ಭದಲ್ಲಿ ಶಸ್ತ್ರಪೂಜೆ ಸಲ್ಲಿಸಿ ಯುದ್ಧಗಳಿಗೆ ಲಿಂಗರಾಜೇಂದ್ರ ತೆರಳುತ್ತಿದ್ದ.
ಶನಿವಾರ ವಿಶೇಷ ಪೂಜೆ
ಯಾವುದೇ ಗ್ರಹಚಾರಗಳು ಅಂಟಿಕೊಳ್ಳಬಾರದು ಎಂಬ ಕಾರಣಕ್ಕೆ ಪ್ರತಿ ಶನಿವಾರ ಆಂಜನೇಯ ಕಲ್ಪೋಕ್ತಪೂಜೆ ನಡೆಯುತ್ತದೆ. ತಿಂಗಳಿಗೆ ಒಂದು ಬಾರಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಅಂದು ಸುಮಾರು ೫೦೦ಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುತ್ತಾರೆ. ಪಂಚಕಜ್ಜಾಯ ನೈವೇಧ್ಯ, ಅಭಿಷೇಕ, ಹೋಮಹವನ ಸೇರಿದಂತೆ ಇತರ ಸೇವೆಗಳು ಹಾಗೂ ದೈನಂದಿನ ಪೂಜೆಗಳು ನಡೆಯುತ್ತದೆ. ಪ್ರತಿ ವರ್ಷ ಏ.೨೭ರಂದು ತಂತ್ರಿಗಳಿಂದ ವಿಜ್ರಂಭಣೆಯಿಂದ ೨ ದಿನ ನಡೆಯುತ್ತದೆ.
೪ ಗಂಟೆಯಲ್ಲಿ ಸಿಕ್ಕಿಬಿದ್ದ ಕಳ್ಳರು
ಪ್ರಸ್ತುತ ವರ್ಷದ ಜುಲೈ ತಿಂಗಳಲ್ಲಿ ಆಂಜನೇಯ ದೇವಸ್ಥಾನದ ಹುಂಡಿ ಕಳವು ಮಾಡಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದರು. ಇದೇ ಸಂದರ್ಭದಲ್ಲಿ ಪಕ್ಕದ ವ್ಯಾಡಂ ಎಂಟರ್ ಪ್ರೈರ್ಸರ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯಮಿಗಳು ಕಂಡು ಬೈಕ್‌ನ್ನು ಹಿಂಭಾಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಚ್ಚೆತ್ತುಕೊಂಡ ಪೊಲೀಸರು ಮಾದಾಪುರ ಸಮೀಪ ವಾಹನ ಅಡ್ಡ ಹಾಕುತ್ತಿದ್ದಂತೆ ಕಳ್ಳರು ತಾವುಗಳು ದೇವಸ್ಥಾನದಲ್ಲಿ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದರು.
ವಿದ್ಯಾಭ್ಯಾಸ ಹಾಗು ಆರೋಗ್ಯದ ದೃಷ್ಠಿಯಿಂದ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ತಿಂಗಳಿಗೆ ಒಂದು ಬಾರಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಭಕ್ತಾದಿಗಳು ತಮ್ಮ ಇಚ್ಚೆಯನ್ನು ಇಲ್ಲಿ ಪೂರೈಸಿಕೊಳ್ಳಬಹುದು.ಸಂಪತ್ ಕುಮಾರ್, ನಿವೃತ್ತ ಕಾರ್ಯನಿರ್ವಹಣಾಧಿಕಾರಿ, ಶ್ರೀ ಆಂಜನೇಯ ದೇವಾಲಯ