

ಹುಬ್ಬಳ್ಳಿ: ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಅಂಗವಾಗಿ ಸ್ಕೀಮ್ ಕಾರ್ಯಕರ್ತೆಯರು (ಆಶಾ, ಅಂಗನವಾಡಿ, ಬಿಸಿಯೂಟ), ಕಟ್ಟಡ ಕಾರ್ವಿುಕರು ಹಾಗೂ ಗುತ್ತಿಗೆ ಕಾರ್ವಿುಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಎಐಯುಟಿಯುಸಿ ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಿನದ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿರುವುದನ್ನು ಕೈ ಬಿಡಬೇಕು. ವಿದ್ಯುತ್ (ತಿದ್ದುಪಡಿ) ಮಸೂದೆ 2023 ಅನ್ನು ಹಿಂಪಡೆಯಬೇಕು. ಪ್ರಿಪೇಯ್್ಡ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು. ಎಲ್ಲ ಪಿಂಚಣಿದಾರರಿಗೆ ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾದ ಪಿಂಚಣಿಯನ್ನು ಖಾತ್ರಿಪಡಿಸಿ ಕನಿಷ್ಠ 10 ಸಾವಿರ ರೂ. ಪಿಂಚಣಿ ನಿಗದಿಪಡಿಸಬೇಕು. ರಾಷ್ಟ್ರೀಯ ಕನಿಷ್ಠ ವೇತನವನ್ನು ತಿಂಗಳಿಗೆ 28 ಸಾವಿರ ರೂ. ಗೆ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕಾಯಂ ಉದ್ಯೋಗಗಳು ತೀವ್ರವಾಗಿ ಕಡಿತವಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಮರ್ಜಿಗೆ ಒಳಗಾಗಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಳ ಮಾಡಿವೆ. ಕಾರ್ವಿುಕರಿಗೆ ಪೂರಕವಾಗಿದ್ದ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಮಾಲೀಕರ ಹಿತಕಾಯುವ ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.
ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಭಾರತಿ ಶೆಟ್ಟರ್, ಮುತ್ತು ವಾಲೀಕರ, ಕಸ್ತೂರಿ, ಲಲಿತಾ, ಇತರರು ಇದ್ದರು.