

ವಿಜಯಪುರ: ಜಿಲ್ಲೆಯ ಜನರ ಬಹುದಿನದ ಕನಸಾದ ‘ವಿಜಯಪುರ ವಿಮಾನ ನಿಲ್ದಾಣ’ ಇನ್ನು ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿದ್ದು, ವಿಮಾನಯಾನ ಸಮಯವನ್ನು ಜನತೆಯ ಒತ್ತಾಸೆಯಂತೆ ಬೆಳಗ್ಗೆ 7ಕ್ಕೆ ಬೆಂಗಳೂರಿನಿಂದ ವಿಜಯಪುರಕ್ಕೆ ಹಾಗೂ ಬೆಳಗ್ಗೆ 8-30ಕ್ಕೆ ವಿಜಯಪುರದಿಂದ ಬೆಂಗಳೂರಿಗೆ ಹಾಗೆ ವಿಜಯಪುರದಿಂದ ಬೆಂಗಳೂರಿಗೆ ಸಂಜೆ 5ಕ್ಕೆ ಹಾಗೂ ಬೆಂಗಳೂರಿನಿಂದ ವಿಜಯಪುರಕ್ಕೆ ಸಂಜೆ 6-30ಕ್ಕೆ ನಿಗದಿಪಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಡಾ. ಎಲ್.ಎಚ್. ಬಿದರಿ ಹೇಳಿದರು.
ಮಂಗಳವಾರ ವಿಮಾನ ನಿಲ್ದಾಣ ಹೋರಾಟ ಸಮಿತಿ ಸದಸ್ಯರೊಂದಿಗೆ ಅಂತಿಮ ಹಂತ ತಲುಪಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಾತನಾಡಿ, ಫೆ. 2021ರಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಬಹುತೇಕ ಕಾಮಗಾರಿ ಅಂತಿಮಗೊಂಡಿದೆ. ಬರುವ ಜೂನ್ ತಿಂಗಳಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ವಿಜಯಪುರ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಮಹೇಶ, ನಿಲ್ದಾಣದಲ್ಲಿರುವ ಎಲ್ಲ ವಿಭಾಗಗಳನ್ನು ಸದಸ್ಯರಿಗೆ ತೋರಿಸಿ ವಿವರಣೆ ನೀಡಿದರು. ಭದ್ರತಾ ವಿಭಾಗದ ಮುಖ್ಯಸ್ಥ ಭೀಮಪ್ಪಾ ಕೆ. ಹಾಗೂ ಆಲೂರ ಕನ್‌ಸ್ಟಕ್ಷನ್ ಮಂಜುನಾಥ ಗಣಿಯವರು ವಿಶೇಷ ಮಾಹಿತಿಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.
ಸದ್ಯಕ್ಕೆ ತುರ್ತು ಸೇವೆ, ಅಗ್ನಿಶಾಮಕ ಘಟಕದ ಅನುಮೋದನೆ ಬರುವುದು ಬಾಕಿ ಇದ್ದು, ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದ್ದು ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ಸಿಗಲಿದೆ ಎಂಬ ಮಾಹಿತಿ ದೊರೆಯಿತು. ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳೊಂದಿಗೆ ವಿಶೇಷ ವಿನ್ಯಾಸಗಳೊಂದಿಗೆ ಸಿದ್ಧವಾಗಿ ನಿಂತಿರುವ ಪ್ರತಿ ವಿಭಾಗವೂ ಆಕರ್ಷಕವಾಗಿರುವುದು ಹೋರಾಟ ಸಮಿತಿಯ ಗಮನಕ್ಕೆ ಬಂತು.
ಈ ವಿಮಾನ ನಿಲ್ದಾಣದ ಕಾಮಗಾರಿ ಚುರುಕುಗೊಳ್ಳಲು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿರುವ ಡಾ. ಎಂ.ಬಿ. ಪಾಟೀಲರನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಸಹ-ಸಂಚಾಲಕ ರಾಜು ಗಚ್ಚಿನಮಠ, ಸದಸ್ಯರಾದ ಮಲ್ಲಮ್ಮ ಯಾಳವಾರ, ಪ್ರಕಾಶ ಮಠ, ಅನೀಲ ಡೊಬ್ಬಿ, ಅರ್ಜುನ ಕೊಕರೆ, ನಂದಲಾಲ ರುಣವಾಲ, ಲೋಕೋಪಯೋಗಿ ಇಲಾಖೆಯ ರಾಜು ಮುಜುಮದಾರ ಇತರರು ಇದ್ದರು.