ವಿಮಾನ ನಿಲ್ದಾಣ ನೀರಿನ ಸಮಸ್ಯೆ ಪರಿಹಾರ : ಅಧಿಕಾರಿಗಳಿಗೆ ಡಾ.ಭರತ್ ಶೆಟ್ಟಿ ಸೂಚನೆ

New Project (15)
Published on

ಗುರುಪುರ: ಕಂದಾವರ ಗ್ರಾಪಂ ವ್ಯಾಪಿಯಲ್ಲಿ ಮಳೆ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹರಿಯುತ್ತಿರುವ ಮಳೆ ನೀರಿನಿಂದ ಸಮಸ್ಯೆ ಉಂಟಾಗಿರುವ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.

ಬಜ್ಪೆಗೆ ಹತ್ತಿರದ ಮುರನಗರದಲ್ಲಿ ಶಾಸಕರು ಮಾತನಾಡಿ, ಇಲ್ಲಿನ ಜನವಸತಿ ಪ್ರದೇಶಗಳಿಗೆ ನಿಲ್ದಾಣದ ಕಡೆಯಿಂದ ಹರಿಯುತ್ತಿರುವ ನೀರಿನಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಅದಾನಿ ಕಂಪನಿ ಅಧಿಕಾರಿಗಳೊಂದಿಗೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಲಾಗಿತ್ತು. ಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು ಎಂದರು.

ಅನೇಕ ವರ್ಷಗಳಿಂದ ವಿಮಾನ ನಿಲ್ದಾಣದ ಸುತ್ತಲಿನ ಜನವಸತಿ ಪ್ರದೇಶಗಳಲ್ಲಿ ಮಳೆ ನೀರು ಹರಿಯುತ್ತಿದ್ದು, ಪದೇ ಪದೆ ಅವಾಂತರ ಸೃಷ್ಟಿಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕ್ರಮವಾಗಿ ರಾಜಕಾಲುವೆ ಸಂಪರ್ಕಿಸುವಂತೆ ಕಾಂಕ್ರೀಟ್ ತೋಡು ನಿರ್ಮಿಸಬೇಕು. ಶೀಘ್ರ ಕ್ರಮ ಕೈಗೊಳ್ಳುವಂತೆ ಈಗಾಗಾಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಇದೇ ವೇಳೆ ಮಳೆಯಿಂದ ತೊಂದರೆಗೀಡಾದ ಕಂದಾವರದ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು, ಸ್ಥಳೀಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net