

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ಅವಶ್ಯವಿರುವ ‘ಬೇಡಿಕೆ ಸಮೀಕ್ಷೆ’ (ಡಿಮಾಂಡ್ ಸರ್ವೇ) ಕೈಗೊಳ್ಳುವಂತೆ ಸಂಸದ ಜಗದೀಶ ಶೆಟ್ಟರ್ ಏರ್‌ಪೋರ್ಟ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಏರ್‌ಪೋರ್ಟ್ ಅಧಿಕಾರಿಗಳ ಸಭೆ ನಡೆಸಿದ ಅವರು, ಬೆಳಗಾವಿ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಎರಡನೇ ರಾಜಧಾನಿ ಎನಿಸಿಕೊಂಡಿದೆ. ವಿಮಾನ ಸೇವೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ನಂತರ ಮೂರನೆಯ ಅತಿ ದೊಡ್ಡ ನಿಲ್ದಾಣವಾಗಿ ಹೆಸರು ಮಾಡಿದ್ದು, ಇಲ್ಲಿಂದ ಈಗಾಗಲೇ ನಿತ್ಯ 10 ವಿಮಾನಗಳು ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿವೆ. ಮಹಾರಾಷ್ಟ್ರದ ಕೊಲ್ಲಾಪುರ ನಗರದಿಂದ ಹಾಗೂ ಬೆಳಗಾವಿ ಜಿಲ್ಲೆಗೆ ಹತ್ತಿರವಿರುವ ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಯಿಂದಲೂ ಪ್ರಯಾಣಿಕರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿವಿಧ ನಗರಗಳಿಗೆ ಪ್ರವಾಸ ಮಾಡುತ್ತಿರುವುದು ವಿಶೇಷ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಎಲ್ಲ ಅರ್ಹತೆ ಹೊಂದಿದೆ. ಸಾರ್ವಜನಿಕರ ಬೇಡಿಕೆಯೂ ಆಗಿದ್ದು, ಈ ಕುರಿತು ಅಗತ್ಯವಿರುವ ‘ಬೇಡಿಕೆ ಸಮೀಕ್ಷೆ’ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಸೂಚಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ಎಸ್. ತ್ಯಾಗರಾಜನ್ ಇದ್ದರು.