ಏರ್‌ಪೋರ್ಟ್ ತಾತ್ಕಾಲಿಕ ಸ್ಥಗಿತಕ್ಕೆ ಪಟ್ಟು, ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆಯಿಂದ ಡಿಸಿಗೆ ಮನವಿ

04fc2d34-cd99-4ff4-81cc-495e02c345fb
Published on

ಬೆಂಗಳೂರು: ಕರೊನಾ ಸೋಂಕು ನಿಯಂತ್ರಣಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅವಶ್ಯಕತೆ ಇದೆ ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಲಕ್ಷ್ಮಿನಾರಾಯಣ್ ಸಲಹೆ ನೀಡಿದರು.

ದೇವನಹಳ್ಳಿ ಜಿಪಂ ಕಚೇರಿಯಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲ್ಲಿ ಮಾತನಾಡಿದ ಜಿಪಂ ಅಧ್ಯಕ್ಷೆ, ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಏರ್‌ಪೋರ್ಟ್‌ನಲ್ಲಿ ಪ್ರತಿನಿತ್ಯ ವಿವಿಧೆಡೆಯಿಂದ ವಿದೇಶಿಗರು ಬಂದು ಹೋಗುವುದು ಸಾಮಾನ್ಯ. ವೈರಸ್‌ನಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆ ಸ್ಥಗಿತಗೊಳಿಸುವುದು ಔಚಿತ್ಯಪೂರ್ಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಮಾತನಾಡಿ, ಏರ್‌ಪೋರ್ಟ್, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ. ಹೆಚ್ಚು ಜನಸಂದಣೆ ಸೇರುವ ಜಾಗದಲ್ಲಿ ಅಧಿಕಾರಿಗಳು ಹೆಚ್ಚೆಚ್ಚು ಅರಿವು ಮೂಡಿಸಬೇಕಿದೆ. ಜನಸಂದಣಿ ಪ್ರದೇಶದಲ್ಲಿ ಸ್ಯಾನಿಟೈಸರ್ ಹಾಗೂ ಕೈ ತೊಳೆಯಲು ಅಗತ್ಯ ಪರಿಕರದ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಸೋಂಕಿತರಿಲ್ಲ: ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲಿಯೂ ಕರೊನಾ ಸೋಂಕು ಪತ್ತೆಯಾಗಿಲ್ಲ. ದೇವನಹಳ್ಳಿ ಏರ್‌ಪೋರ್ಟ್ ಮೂಲಕ ಬರುವ ಎಲ್ಲ ಪ್ರಯಾಣಿಕರನ್ನು ಸ್ಕಾೃನಿಂಗ್ ಮಾಡಲಾಗುತ್ತಿದೆ. ಸೋಂಕಿನ ಶಂಕೆ ಕಂಡುಬಂದಲ್ಲಿ, ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಐಸಿಲೇಷನ್ ವ್ಯವಸ್ಥೆ ಮಾಡಲಾಗಿದೆ. ಕರೊನಾ ಬಗ್ಗೆ ಭಯ ಬೇಡ ಆದರೆ ಮುನ್ನಚ್ಚರಿಕೆ ಅಗತ್ಯ ಎಂದು ಜಿಪಂ ಅಧ್ಯಕ್ಷೆ ಮನವಿ ಮಾಡಿದರು.

ಗ್ರಾಮಾಂತರ ಜಿಲ್ಲೆಯಲ್ಲಿನ ಹಲವು ಕಂಪನಿಗಳು ಕರೊನಾವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇಲ್ಲಿನ ಸಿಬ್ಬಂದಿಯೇ ಹೆಚ್ಚೆಚ್ಚು ವಿದೇಶ ಪ್ರವಾಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ತಾತ್ಕಾಲಿಕವಾಗಿ ತಡೆಹಾಕಬೇಕಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕಂಪನಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾಡಳಿತಕ್ಕೆ ಒಂದೇ ಪ್ರವೇಶ: ದೇವನಹಳ್ಳಿ ತಾಲೂಕು ಚಪ್ಪರಕಲ್ಲಿನಲ್ಲಿನ ಜಿಲ್ಲಾಡಳಿತ ಭವನಕ್ಕೆ ನಾಲ್ಕು ಪ್ರವೇಶದ್ವಾರಗಳಿದ್ದು, ಮೂರು ದ್ವಾರಗಳನ್ನು ಬಂದ್ ಮಾಡಿಸಿ, ಒಂದೇ ದ್ವಾರದಲ್ಲಿ ಸ್ಯಾನಿಟೈಸರ್, ಮಾಸ್ಕ್ ಮತ್ತಿತರ ಮುಂಜಾಗ್ರತಾ ಕ್ರಮ ಪೂರೈಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಜಿಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ತಿಳಿಸಿದರು.

ಧಾರ್ಮಿಕ ಕೇಂದ್ರಗಳಿಗೂ ಅನ್ವಯ: ಜಿಲ್ಲೆಯ ದೇಗುಲ, ಮಸೀದಿ, ಚರ್ಚ್ ಹಾಗೂ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡುವುದೇ ಸೂಕ್ತ. ಕರೊನಾ ತಡೆಗೆ ಎಲ್ಲರೂ ಕೈಜೋಡಿಬೇಕು. ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದೇ ಸದ್ಯಕ್ಕಿರುವ ಪರಿಹಾರ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net