Airport ಅಂಕೋಲಾ ಅಲಗೇರಿಯಲ್ಲಿ ಮತ್ತೆ 6 ಎಕರೆ ಭೂ ಸ್ವಾಧೀನ

Airport
Published on

ಕಾರವಾರ: ಅಂಕೋಲಾದ ಅಲಗೇರಿಯಲ್ಲಿ ವಿಮಾನ ನಿಲ್ದಾಣ (Airport ) ನಿರ್ಮಾಣದ ಭೂ ಸ್ವಾಧೀನ, ಪರಿಹಾರ ಪುನರ್ವಸತಿ ಪ್ರಕ್ರಿಯೆಗಳು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಶಾಶಕ ಸತೀಶ ಸೈಲ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಿರಾಶ್ರಿತರ ಕುಟುಂಬಗಳ ಸಭೆ ನಡೆಸಿ ಅವರು ಮಾತನಾಡಿದರು. ಈಗಾಗಲೇ 97 ಎಕರೆ ಭೂಮಿಯನ್ನು ಅಂಕೋಲಾದ ಅಲಗೇರಿ, ಬಾವಿಕೇರಿ, ಬೇಲೆಕೇರಿ ಗ್ರಾಮಗಳಲ್ಲಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಸ್ಥಳೀಯರ ಬೇಡಿಕೆಯಂತೆ ಹೆಚ್ಚುವರಿ ಪರಿಹಾರಕ್ಕೆ ಸರ್ಕಾರ ಒಪ್ಪಿದ್ದು, 11 ಕೋಟಿ ರೂ.ಗಳು ಒಂದೆರಡು ದಿನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಕ್ಕಾಗಿ ಇನ್ನೂ 6.5 ಎಕರೆ ಜಾಗ ಬೇಕಾಗಿದ್ದು, ಇದೇ ಭೂಮಿಯ ಪಕ್ಕದಲ್ಲಿ ಖಾಸಗಿ ಜಮೀನುಗಳ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆ ಸ್ವೀಕರಿಸಿ, ಶೀಘ್ರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಅಲ್ಲಿ, 5 ಮನೆಗಳಿದ್ದು, ಎಲ್ಲವನ್ನು ಸಮೀಕ್ಷೆ ನಡೆಸಲಾಗುವುದು ಎಂದರು.

Airport ಪರಿಹಾರ ಶೀಘ್ರ

ಹಿಂದಿನ ಸರ್ಕಾರ ನಿರಾಶ್ರಿತರಿಗೆ 30*40 ಸೈಟ್ ನೀಡಲು ನಿರ್ಧರಿಸಿತ್ತು. ಅದನ್ನು ಚರ್ಚಿಸಿ 60*90 ಗಾತ್ರದ ನಿವೇಶನಗಳನ್ನು 76 ಕುಟುಂಬಗಳಿಗೆ ನೀಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಬೊಗ್ರಿಬೈಲ್, ಹೊಸಗದ್ದೆ, ಮಾಸ್ತಿಕಟ್ಟಾ ಸಮೀಪದ ಕೌಲಳ್ಳಿ ಹಾಗೂ ಬೆಳಸೆಯಲ್ಲಿ ಪುನರ್ವಸತಿ ಮಾಡಲು ನಿರ್ಧರಿಸಲಾಗಿದೆ.

ಒಂದೊಂದು ಸಮುದಾಯಕ್ಕೆ ಒಂದೊಂದು ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ.

ಆಚಾರಿ ಮತ್ತು ಸೋನಾರ ಸಮುದಾಯದವರು ತಮಗೆ ಒಂದೇ ಕಡೆ ನಿವೇಶನ ನೀಡುವಂತೆ ಮನವಿ ಮಾಡಿದ್ದಾರೆ. ಸ್ವಲ್ಪ ಗೊಂದಲ ಉಂಟಾಗಿದೆ. ಚರ್ಚಿಸಿ, ಅದನ್ನೂ ಶೀಘ್ರದಲ್ಲಿ ಬಗೆಹರಿಸಲಾಗುವುದು. ಚೀಟಿ ಎತ್ತುವ ಮೂಲಕ ಸೈಟ್‌ಗಳ ಹಂಚಿಕೆ ನಡೆಯಲಿದೆ ಎಂದರು.

ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ವಿಮಾನ ನಿಲ್ದಾಣ (Airport )ಆಗಬೇಕಿದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಕೈಗೊಂಡಿದ್ದೇವೆ. ನಿರಾಶ್ರಿತರಾಗುವವರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ. ಮನೆ, ಹಾಗೂ ಆಸ್ತಿಗಳ ಸರ್ವೇಯಲ್ಲಿ ವ್ಯತ್ಯಾಸವಾದ ದೂರು ಬಂದಿದ್ದು, ಮರು ಸಮೀಕ್ಷೆಗೆ ಸೂಚಿಸಲಾಗಿದೆ ಎಂದರು. ಅಪರ ಜಿಲ್ಲಾಽಕಾರಿ ಸಾಜೀದ್ ಮುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net