ಜಾಲತಾಣದಲ್ಲಿ ಕನ್ನಡ ಆಯ್ಕೆ

air
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಲಾಗಿದೆ.

ಕನ್ನಡ ಭಾಷೆಗೆ ಆದ್ಯತೆ ನೀಡುವ ಜತೆಗೆ ಪ್ರಾದೇಶಿಕ, ಸಾಂಸ್ಕೃತಿಕ ಮೌಲ್ಯ ಎತ್ತಿಹಿಡಿಯುವ ನಿಟ್ಟಿನಲ್ಲಿ ಇದನ್ನು ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆಯ್ಕೆಯನ್ನು ಬಳಸುವ ಮೂಲಕ, ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಸುಲಭವಾಗಿ ತಮ್ಮದೇ ಭಾಷೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಕನ್ನಡದಲ್ಲಿ ವಿಮಾನಗಳ ಹಾರಾಟದ ಮಾಹಿತಿ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಬಗ್ಗೆ ತಡೆರಹಿತ ಮಾಹಿತಿ ಲಭ್ಯವಿರಲಿದೆ, ಪ್ರಯಾಣಿಕರು ವಿಮಾನಗಳನ್ನು ಕಾಯ್ದಿರಿಸಲು, ಸಾರಿಗೆ ಆಯ್ಕೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳ ಹುಡುಕಾಟ ಸುಲಭವಾಗಲಿದೆ, ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು, ಪ್ರಯಾಣಕ್ಕೆ ಬೇಕಾದ ಅನುಕೂಲ ಮಾಹಿತಿ ಪಡೆಯಬಹುದಾಗಿದೆ.

ಭಾಷೆಯ ಶ್ರೀಮಂತಿಕೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ ಸಾರಿಗೆ ಕೇಂದ್ರವಾಗಿರದೇ, ಸಾಕಷ್ಟು ಬೆಳೆದಿದೆ. ಇದೀಗ ಸ್ಥಳೀಯ ಭಾಷೆಯಲ್ಲೇ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸುವ ಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಕೆಗೆ ಆದ್ಯತೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net