

ಹುಬ್ಬಳ್ಳಿ: ಬಾಂಬ್ ಸ್ಪೋಟಿಸುವುದಾಗಿ ಭಾನುವಾರ ಮಧ್ಯಾಹ್ನ ಇ-ಮೇಲ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಬೆದರಿಕೆಯೊಡ್ಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಿ ನಿಲ್ದಾಣದೊಳಗೆ ಬಿಡಲಾಗುತ್ತಿದೆ.
ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಇ-ಮೇಲ್ ಐಡಿಯಿಂದ ಬೆದರಿಕೆ ಸಂದೇಶ ರವಾನೆಯಾಗಿದೆ.
ಹೀಗಾಗಿ ತಕ್ಷಣ ಬಾಂಬ್ ತಪಾಸಣಾ ದಳ ಮತ್ತು ಭದ್ರತಾ ಸಿಬ್ಬಂದಿ ಜತೆ ಸಭೆ ನಡೆಸಿ, ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಾರೆ. ಸಂದೇಶ ಬಂದ ಇ-ಮೇಲ್ ಐಡಿ ಮಾಹಿತಿಯನ್ನು ಪೊಲೀಸರಿಗೆ ನೀಡಿ, ಪ್ರಕರಣ ದಾಖಲಿಸುತ್ತೇವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಶ್ರೀಪಾದ ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಆಂತರಿಕ ಭದ್ರತಾ ಸಿಬ್ಬಂದಿ ಮತ್ತು ಗುಪ್ತಚರ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಈಗಾಗಲೇ ಇದೇ ರೀತಿಯ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದವು.