

ಮಡಿಕೇರಿ:
ಪ್ರವಾಸೋದ್ಯಮ ಮತ್ತು ಕಾಫಿ ಮೂಲಕ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೆ ಸಂಪರ್ಕ ಗಗನ ಕುಸುಮವಾಗಿಯೇ ಉಳಿಯುವುದು ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಕೂಡ ಕಮರುವ ಲಕ್ಷಣಗಳು ಕಂಡುಬರುತ್ತಿದೆ. ಸಾಕಷ್ಟು ಅಧ್ಯಯನ ಮಾಡಿ ಮಿನಿ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ಗುರುತಿಸಿರುವ ಜಾಗವೇ ಸರಿಯಿಲ್ಲ ಎನ್ನುವ ಕಾರಣ ಕೊಟ್ಟು ಪ್ರಾಕೃತಿಕ ಕಾರಣಗಳಿಂದ ಕಾರ್ಯಸಾಧುವಲ್ಲದ ಮಡಿಕೇರಿ ಹೆಸರು ಮುನ್ನಲೆಗೆ ತಂದಿರುವುದು ಈ ಅನುಮಾನಗಳಿಗೆ ಕಾರಣವಾಗಿದೆ.
ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಮತ್ತು ಕರ್ನಾಟಕದ ಕಾಫಿ ರಫ್ತಿನಲ್ಲಿ ಶೇ.50 ಹಾಗೂ ದೇಶದ ಕಾಫಿ ರಫ್ತಿನಲ್ಲಿ ಶೇ. 35ರಷ್ಟು ಪಾಲು ಹೊಂದಿರುವ ಕೊಡಗು ಇಲ್ಲಿಯ ತನಕವೂ ರೈಲ್ವೇ ಮತ್ತು ವಿಮಾನಯಾನ ಸಂಪರ್ಕದಿAದ ವಂಚಿತವಾಗಿದೆ. ಜಿಲ್ಲೆಗೆ ರೈಲ್ವೆ ಸಂಪರ್ಕಕ್ಕೆ ಸಂಬAಧಿಸಿದAತೆ ರಾಜ್ಯ ಸರ್ಕಾರದ ನಿರ್ಲಕ್ಷö್ಯದ ಬಗ್ಗೆ ಈಚೆಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇರವಾಗಿ ಬೆರಳು ತೋರಿಸಿದ್ದರು. ಉಡಾನ್ ಯೋಜನೆ ಅಡಿಯಲ್ಲಿ ಕೊಡಗಿಗೆ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಯಾರಿದ್ದರೂ ಇಲ್ಲಿಯೂ ರಾಜ್ಯ ಸರ್ಕಾರದ ನಿರಾಸಕ್ತಿ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆ ವತಿಯಿಂದ ಈಚೆಗೆ ಇಲ್ಲಿನ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದಿದ್ದ ಸಂವಾದ ಕಾರ್ಯಕ್ರಮ ಮತ್ತು ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣ ಸೌಕರ್ಯಕ್ಕೆ ಸಂಬAಧಪಟ್ಟAತೆ ಮಾತಾಡುವಾಗ ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿ ಜಾಗ ಗುರುತಿಸಿದ್ದರೂ ಅದು ಸೂಕ್ತವಲ್ಲ ಎಂದು ವರದಿ ಬಂದಿದೆ ಎನ್ನುವ ಮಾಹಿತಿ ನೀಡಿದ್ದಲ್ಲದೆ ಮಡಿಕೇರಿ ಸಮೀಪ ಸಮತಟ್ಟು ಪ್ರದೇಶ ಲಭ್ಯವಾದಲ್ಲಿ ಅದನ್ನು ಸರ್ಕಾರ ಮಾರುಕಟ್ಟೆ ದರದಲ್ಲಿ ಖರೀದಿಸಿ, ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿದೆ ಎನ್ನುವ ಮಾತನ್ನು ಹೇಳಿದ್ದರು.
ಮಂತರ್ ಗೌಡ ಅವರ ಮಾತು ಈಗ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಬಹುತೇಕ ಬಯಲು ಪ್ರದೇಶವಾದ ಕುಶಾಲನಗರ ವ್ಯಾಪ್ತಿಯಲ್ಲೇ ಸೂಕ್ತ ಜಾಗ ಇಲ್ಲವೆಂದಾದ ಮೇಲೆ ಬೆಟ್ಟ-ಗುಡ್ಡಗಳಿಂದ ಆವೃತ್ತವಾದ ಮಡಿಕೇರಿಯಲ್ಲಿ ಸರಿಯಾದ ಜಾಗ ಸಿಗುತ್ತದೆಯೇ ಎನ್ನುವ ಪ್ರಶ್ನೆಗಳು ಎದ್ದಿದೆ. ನೂರಾರು ಎಕರೆ ಸಮತಟ್ಟು ಜಾಗ ಒಂದೇ ಕಡೆ ಇಲ್ಲಿ ಎಲ್ಲಿ ಸಿಗುತ್ತದೆ ? ಸಿಕ್ಕಿದರೂ ವರ್ಷದ ಬಹುತೇಕ ಕಾಲ ಮಂಜು ಕವಿದ ವಾತಾವರಣ ಇರುವ ಮಡಿಕೇರಿ ಪ್ರಾಕೃತಿಕವಾಗಿ ಎಷ್ಟು ಸೂಕ್ತವಾಗುತ್ತದೆ ? ಎನ್ನು ಮಾತುಗಳೂ ಕೇಳಿಬರುತ್ತಿದೆ. ಈ ಮೂಲಕ ಯೋಜನೆಯ ಅನುಷ್ಠಾನ ಆದಷ್ಟು ಹೆಚ್ಚು ಕಾಲ ವಿಳಂಬ ಮಾಡುವ ಹುನ್ನಾರ ನಡೆದಿದೆಯಾ ಎನ್ನುವ ಅನುಮಾನಗಳೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕೊಡಗಿಗೆ ಒಂದು ಮಿನಿ ವಿಮಾನ ನಿಲ್ದಾಣ ಬೇಕು ಎನ್ನುವುದು ಸ್ಥಳೀಯರ ಹಳೆಯ ಬೇಡಿಕೆ. ಜಿಲ್ಲೆಯಲ್ಲಿ ಕನಿಷ್ಠ ಮಿನಿ ವಿಮಾನ ನಿಲ್ದಾಣ ಇದ್ದರೆ ಜಗತ್ತಿನ ಜತೆ ಸಂಪರ್ಕ ಸುಲಭವಾಗಲಿದೆ. ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳ ಬೆಳವಣಿಗೆ ದÊಷ್ಟಿಯಿಂದಲೂ ಪೂರಕವಾಗಲಿದೆ ಎನ್ನುವ ಸದುz್ದೆÃಶವೂ ಇದರ ಹಿಂದಿದೆ. ಮಡಿಕೇರಿ ಶಾಸಕರೂ ಆಗಿದ್ದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಾ ಬಂದಿದ್ದರು.
ಬೆಟ್ಟ-ಗುಡ್ಡಗಳಿಂದ ಕೂಡಿರುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಿಶಾಲವಾಗಿರುವ ಸಮತಟ್ಟು ಜಾಗ ಒಂದೇ ಕಡೆಯಲ್ಲಿ ಸಿಗುವುದು ಕಷ್ಟ. ಆದರೂ ಜಿಲ್ಲಾ ಕೇಂದ್ರ ಮಡಿಕೇರಿಯ ಸುತ್ತಮುತ್ತ, ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಚಿಕ್ಕ ಅಳುವಾರ, ಬ್ಯಾಡಗೊಟ್ಟ, ಬೈದಗುಟ್ಟ, ಮಾದಾಪುರ, ಕೂಡಿಗೆ ಸೇರಿದಂತೆ 7 ಕಡೆಗಳಲ್ಲಿ ಹುಡುಕಾಡಿ ಕೊನೆಗೆ ಕುಶಾಲನಗರ ತಾಲೂಕು ಕೂಡಿಗೆ ಕÊಷಿ ಫಾರಂ ಆವರಣದಲ್ಲಿನ ವಿಶಾಲವಾದ ಜಾಗದ ಬಳಕೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸÀರ್ಕಾರ ಮತ್ತು ಕಂದಾಯ ಇಲಾಖೆ ಹೆಸರಿನಲ್ಲಿರುವ 16.81 ಎಕರೆ, ಕೂಡಿಗೆ ಕÊಷಿ ಫಾರಂಗೆ ಸೇರಿರುವ 32.44 ಎಕರೆ ಹಾಗೂ ಸೈನಿಕ ಶಾಲೆಗೆ ಸೇರಿರುವ 0.40 ಎಕರೆ ಸೇರಿ ಒಟ್ಟು 49.65 ಎಕರೆ ಜಾಗವನ್ನು ಇದೇ ಉದ್ದೇಶಕ್ಕೆ ಕಾಯ್ದಿರಿಸಲಾಗಿತ್ತು.
ಭಾರತೀಯ ವಿಮಾನಯಾನ ಪ್ರಾಧಿಕಾರದ ತಜ್ಞರು ಇಲ್ಲಿಗೆ 6 ಬಾರಿ ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದರು. 2019ರ ನವೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ಕರ್ನಾಟಕದಲ್ಲಿ ಉz್ದÉÃಶಿತ ವಿಮಾನ ನಿಲ್ದಾಣಗಳ ಪೈಕಿ ಕೊಡಗಿನ ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಾನ ಸಿಕ್ಕಿತ್ತು. ಉಡಾನ್ ಯೋಜನೆ ಅಡಿಯಲ್ಲಿ ಒಂದು ಕಿ.ಮೀ. ಉದ್ದದ ರನ್ ವೇ ಇರುವ ಮಿನಿ ವಿಮಾನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಸಂದರ್ಭವೂ ವಿವಿಧ ಇಲಾಖೆಗಳ ತಜ್ಞರ ತಂಡ ಆಗಮಿಸಿ ಸ್ಥಳ ಪರಿಶೀಲನೆಯನ್ನೂ ನಡೆಸಿತ್ತು.
ಮತ್ತೆ ಈ ವರ್ಷವೂ ಉಡಾನ್ ಯೋಜನೆ ಅಡಿಯಲ್ಲಿ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣದ ಪ್ರಸ್ತಾಪ ಇರುವ ಬಗ್ಗೆ ಕೇಂದ್ರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಮಾಹಿತಿ ಕೊಟ್ಟಿದ್ದರು. ಸಂಸದ ಬಸವರಾಜ ಬೊಮ್ಮಾಯಿ ಸಂಸತ್‌ನಲ್ಲಿ ಕೇಳಿದ್ದ ಚುಕ್ಕಿ ಗುರುತು ಇಲ್ಲದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್, 'ಉಡಾನ್‌ನಡಿ ಏರ್‌ಸ್ಟಿçಪ್ ನಿರ್ಮಾಣಕ್ಕೆ ಕರ್ನಾಟಕದ ಬಳ್ಳಾರಿ, ಕೋಲಾರ, ಕುಶಾಲನಗರ, ರಾಯಚೂರು ಹಾಗೂ ಹಾಸನವನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಈಗ ಎಲ್ಲಿ ಇದನ್ನು ನಿರ್ಮಿಸಬೇಕು ಎನ್ನುವುದೇ ಪ್ರಶ್ನೆಯಾಗಿದೆ.
ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣದ ಕನಸು ಜೀವಂತ ಆಗಿರುವಂತೆಯೇ ರಾಜ್ಯ ಸರ್ಕಾರ 2022ರ ಬಜೆಟ್‌ನಲ್ಲಿ ರಾಜ್ಯದ ಮೂರು ಕಡೆ ಹೆಲಿಪೋರ್ಟ್ ನಿರ್ಮಾಣಕ್ಕೆ ಘೋಷಿಸಿದ್ದ ಸ್ಥಳಗಳ ಪೈಕಿ ಕೊಡಗು ಕೂಡ ಸೇರಿತ್ತು. ಈ ಹಿನ್ನೆಲೆಯಲ್ಲಿ ಜಾಗದ ಪರಿಶೀಲನೆಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮೂಲ ಸೌಲಭ್ಯ ಮತ್ತು ಕೈಗಾರಿಕಾ ಅಭಿವÊದ್ಧಿ ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ರವಿ ಸೀ ಪ್ಲೇನ್ ಯೋಜನೆ ಜಾರಿ ಸಾಧ್ಯತೆಯ ಪ್ರಸ್ತಾಪ ಮಾಡಿದ್ದರು. ಹೆಲಿಪೋರ್ಟ್ಗೆ ಮಡಿಕೇರಿಯಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆ ಕಂಡುಬAದಿದ್ದರಿAದ ಮಿನಿ ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಕೂಡಿಗೆಯ ಜಾಗವನ್ನೇ ಹೆಲಿಪೋರ್ಟ್ಗೆ ಬಳಸುವ ಸುಳಿವು ನೀಡಿದ್ದಲ್ಲದೆ, ಹಾರಂಗಿ ಹಿನ್ನೀರಿನಲ್ಲಿ ಸೀ ಪ್ಲೇನ್ ಕನಸನ್ನು ಈ ಸಂದರ್ಭದಲ್ಲಿ ಬಿತ್ತಿ ತೆರಳಿದ್ದರು.
ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣಕ್ಕಾಗಿ ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿ ಜಾಗ ಗುರುತಿಸಿದ್ದರೂ ಅದು ಸೂಕ್ತವಲ್ಲ ಎಂದು ವರದಿ ಬಂದಿದೆ. ಹಾಗಾಗಿ ಮಡಿಕೇರಿ ಸಮೀಪ ಸಮತಟ್ಟು ಪ್ರದೇಶ ಲಭ್ಯವಾದಲ್ಲಿ ಅದನ್ನು ಸರ್ಕಾರ ಮಾರುಕಟ್ಟೆ ದರದಲ್ಲಿ ಖರೀದಿಸಿ, ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ ನಾಲ್ಕು ಕಡೆ ಹೆಲಿಪೋರ್ಟ್ ಸ್ಥಾಪನೆಗೂ ಸರ್ಕಾರ ಮುಂದಾಗಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಜಿಲ್ಲೆಯ 7 ಕಡೆಗಳಲ್ಲಿ ಅಧ್ಯಯನ ನಡೆಸಿ ಕೊನೆಗೆ ಕೂಡಿಗೆ ಕೃಷಿ ಫಾರಂ ಜಾಗವನ್ನು ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಬೇಕಾಗುವ ಜಾಗವನ್ನೂ ಗುರುತು ಮಾಡಲಾಗಿತ್ತು. ಇಲ್ಲಿ ವಿಮಾನ ನಿಲ್ದಾಣ ಆದರೆ ವರ್ಷದಲ್ಲಿ ಕನಿಷ್ಠ 9 ತಿಂಗಳು ವಿಮಾನಗಳು ಕಾರ್ಯಾಚರಣೆ ನಡೆಸಬಹುದು. ಆದರೆ ವರ್ಷದ ಎಲ್ಲಾ ಕಾಲದಲ್ಲೂ ಮಂಜು ಕವಿದಿರುವ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿರುವ ಮಡಿಕೇರಿಯಲ್ಲಿ ಮಿನಿ ವಿಮಾನ ನಿಲ್ದಾಣ ಎಷ್ಟರ ಮಟ್ಟಿಗೆ ಕಾರ್ಯಸಾಧುವಾಗುತ್ತದೆ ? ಇದು ಕೇವಲ ಯೋಜನೆಯನ್ನು ವಿನಾಕಾರಣ ವಿಳಂಬ ಮಾಡುವ ಚಿಂತನೆಯಷ್ಟೇ ಆಗಿದೆ.
ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ