

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ಕೊಡಮಾಡುವ ಪ್ರವೇಶ ವರ್ಧಕ ಮಾನ್ಯತೆ (ಎಇಎ) ಕಾರ್ಯಕ್ರಮದಡಿ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ದೇವನಹಳ್ಳಿಯಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರು ಸುಲಭವಾಗಿ ಸಂಚರಿಸಲು ಹಾಗೂ ಇತರ ಸೌಲಭ್ಯಗಳನ್ನು ಸರಳವಾಗಿ ಬಳಸಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಥ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಕರ್ಯ ಒದಗಿಸುವ ಎಇಎ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
ಪ್ರಯಾಣಿಕರ ಅನುಭವ ಆಧರಿಸಿ ಮಾನ್ಯತೆ: ಮೂರು ಪ್ರಗತಿಶೀಲ ಹಂತಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ವಿಮಾನ ನಿಲ್ದಾಣಗಳ ಕಾರ್ಯತಂತ್ರ, ನೀತಿ ನಿಯಮಗಳು ಮತ್ತು ಅವುಗಳಿಂದ ದೊರೆಯುವ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುತ್ತದೆ. ಪ್ರಯಾಣಿಕರು, ಸಂದರ್ಶಕರು ಮತ್ತು ಸಿಬ್ಬಂದಿ ಸೇರಿ ವಿಮಾನ ನಿಲ್ದಾಣದ ಎಲ್ಲ ಬಳಕೆದಾರರ ಪ್ರಯಾಣ ಅನುಭವವನ್ನು ಆಧರಿಸಿ ಈ ಮಾನ್ಯತೆ ನೀಡಲಾಗುತ್ತದೆ ಎಂದು ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಥ ಪ್ರಯಾಣಿಕರಿಗೆ ಸಮರ್ಪಕ ಸೇವೆ ನೀಡುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದ್ದು, ಇದು ವಿಮಾನ ನಿಲ್ದಾಣದಲ್ಲಿ ದೊರೆಯುವ ಸೇವೆಗಳ ಮೇಲ್ವಿಚಾರಣೆ ಮಾಡುತ್ತದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ನೆರವು ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಗೆ ಪೂರ್ವಭಾವಿ ತರಬೇತಿ ನೀಡಲಾಗಿದೆ. ಪ್ರಯಾಣಿಕರಿಗೆ ಯಾವುದೇ ಒತ್ತಡವಾಗದಂತೆ ಸಿಬ್ಬಂದಿ ಸದಾ ಸಹಕಾರ ನೀಡಲಿದ್ದಾರೆ ಎಂದು ಸತ್ಯಕಿ ರಘುನಾಥ್ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಆತ್ಮೀಯ ಸತ್ಕಾರ: ಎಸಿಐನಿಂದ ಪ್ರವೇಶ ವರ್ಧಕ ಮಾನ್ಯತೆ ದೊರೆತಿರುವುದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಸೂಕ್ತ ಸೌಲಭ್ಯ ಒದಗಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಿದೆ. ಎಲ್ಲ ಟರ್ಮಿನಲ್‌ಗಳಲ್ಲಿ ನಮ್ಮ ಸಿಬ್ಬಂದಿಯ ಕಾರ್ಯಕ್ರಮತೆ ಹೆಚ್ಚಿಸಲು ಮತ್ತು ವಿಮಾನ ನಿಲ್ದಾಣದಲ್ಲಿನ ಇತರ ಸಂಸ್ಥೆಗಳ ಜತೆ ನಿರಂತರ ಸಹಯೋಗ ಸಾಧಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಆತ್ಮೀಯವಾಗಿ ಸತ್ಕರಿಸುವ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರೆಯಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಸಂಸತ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2022 ರಲ್ಲಿ ಸನ್‌ಫ್ಲಾವರ್ ಲ್ಯಾನ್ಯಾರ್ಡ್ ಯೋಜನೆಯನ್ನು ಪರಿಚಯಿಸಿದ್ದು, ಇದು ಗೋಚರಿಸದ ಅಂಗವಿಕಲತೆ ಹೊಂದಿರುವವರಿಗೆ ಅಗತ್ಯ ಸೌಲಭ್ಯ ನೀಡುವ ಉದ್ದೇಶ ಹೊಂದಿದೆ. ಈ ಪ್ರಯತ್ನಗಳು ಸಂಚಾರ ಸಮಸ್ಯೆ ಮತ್ತು ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪ್ರಯಾಣದುದ್ದಕ್ಕೂ ಒದಗಿಸುವುದಾಗಿದೆ ಎಂದು ತಿಳಿಸಿದ್ದಾರೆ.