2024ರಲ್ಲಿ 40 ದಶಲಕ್ಷ ಜನರ ಪ್ರಯಾಣ

airport
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೂಲಕ ವಿಮಾನಯಾನ ನಡೆಸುವವರ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿದ್ದು 2024ರ ಸಾಲಿನಲ್ಲಿ 40.73 ದಶಲಕ್ಷ ಮಂದಿ ಪ್ರಯಾಣಿಸುವ ಮೂಲಕ ವಿಮಾನ ನಿಲ್ದಾಣ ಆರಂಭದ ಬಳಿಕ ಇದು ಹೊಸ ದಾಖಲೆ ಎನಿಸಿದೆ.

ಪ್ರತಿದಿನ ಸರಾಸರಿ 723 ವಿಮಾನಗಳು ಹಾರಾಟ ನಡೆಸುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.21 ಗಮನಾರ್ಹ ಏರಿಕೆ ಕಂಡಿದೆ.

ಕಳೆದ ಸಾಲಿನಲ್ಲಿ 496,227 ಮೆಟ್ರಿಕ್‌ಟನ್ ದಾಖಲೆ ಸರಕು ಸಾಗಣೆ, ಕಾರ್ಗೋಟನ್‌ನಲ್ಲಿ ಗಮನಾರ್ಹ ಬೆಳವಣಿಗೆ, ವಾರ್ಷಿಕವಾಗಿ ಶೇ.ದಾಖಲೆ ನಿರ್ಮಾಣ ಮಾಡಿದೆ.

1,884 ಮೆಟ್ರಿಕ್‌ಟನ್ ಒಂದೇ ದಿನದಲ್ಲಿ ದಾಖಲೆಯಾದ ಅತಿ ಹೆಚ್ಚು ಸರಕು ಸಾಗಣೆ ಎನಿಸಿದೆ. ಈ ಮೂಲಕ ಜಾಗತಿಕವಾಗಿ ಅತಿ ದೊಡ್ಡ ವಿಮಾನ ನಿಲ್ದಾಣಗಳ ಸಾಲಿಗೆ ಕೆಂಪೇಗೌಡ ವಿಮಾನ ನಿಲ್ದಾಣವೂ ಸೇರ್ಪಡೆಯಾಗಿದೆ. ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗೂ ವಿಮಾನ ಹಾರಾಟವನ್ನು ಪ್ರಾರಂಭಿಸಲಾಗಿದೆ.

ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ : 2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 37.2 ದಶಲಕ್ಷವಾಗಿತ್ತು. ಆದರೆ, 2024 ರಲ್ಲಿ 40.73 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ. 2024ರ ಅ.20 ರಂದು ಒಂದೇ ದಿನದಲ್ಲಿ 126,532 ಪ್ರಯಾಣಿಕರು ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ.

ವಿಮಾನ ನಿಲ್ದಾಣದ ಮೂಲಕ 75 ದೇಶೀಯ ಮತ್ತು 30 ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸೇವೆ ಒದಗಿಸಲಾಗುತ್ತಿದೆ. ಈ ಮೂಲಕ ಪ್ರಯಾಣಿಕರ ಮತ್ತು ಸರಕುಗಳ ಸಾಗಣೆಗೆ ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಹೆಬ್ಬಾಗಿಲಾಗಿ ವಿಮಾನ ನಿಲ್ದಾಣ ತನ್ನ ಸ್ಥಾನವನ್ನು ಮತ್ತಷ್ಟು ಬಲಗೊಳಿಸಿಕೊಂಡಿದೆ. ಇಂಡಿಗೋ ಸಾಧನೆ:

2024 ರ ಅಂತ್ಯದ ವೇಳೆಗೆ, ಇಂಡಿಗೋ ಬೆಂಗಳೂರಿನಿಂದ 46 ಸಾಪ್ತಾಹಿಕ ನಿರ್ಗಮನ ವಿಮಾನಗಳನ್ನು ಸೇರ್ಪಡೆಗೊಳಿಸಿದೆ. ಇದು ಭಾರತದಿಂದ ನಿರ್ಗಮಿಸುವ 240 ಹೆಚ್ಚುವರಿ ಸಾಪ್ತಾಹಿಕ ನಿರ್ಗಮನ ವಿಮಾನಗಳ ಮೂರನೇ ಒಂದು ಭಾಗವಾಗಿದೆ. ಈ ಮೂಲಕ, 2024 ರಲ್ಲಿ ಇಂಡಿಗೋ ಭಾರತದಲ್ಲಿ ಅತಿ ಹೆಚ್ಚು ವಿಮಾನಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇರ್ಪಡೆಗೊಳಿಸಿದೆ.

ಕಾರ್ಗೋ ವ್ಯಾಪಾರದಲ್ಲಿ ಮೈಲಿಗಲ್ಲು: ಸರಕು ಸಾಗಣೆಯಲ್ಲೂ ಗಮನಾರ್ಹ ಬೆಳವಣಿಗೆ ಕಂಡಿದೆ. ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲೂ ಶೇ.23ಬೆಳವಣಿಗೆ ಕಂಡಿದ್ದು, 313,981 ಮೆಟ್ರಿಕ್‌ಟನ್ ಕೊಳೆತುಹೋಗುವ ಪದಾರ್ಥಗಳು, ಬಿಡಿ ಭಾಗಗಳು, ಎಂಜಿನಿಯರಿಂಗ್ ಸರಕು ಮತ್ತು ಇ-ಕಾಮರ್ಸ್ ಸಾಗಣೆಗೆ ಬೇಡಿಕೆ ಹೆಚ್ಚಾಗಿದೆ. ದೇಶೀಯವಾಗಿ ಸರಕುಗಳ ಸಾಗಣೆ ಪ್ರಮಾಣವು ಶೇ. 9 ಹೆಚ್ಚಾಗಿದ್ದು, 182,246 ಮೆಟ್ರಿಕ್‌ಟನ್ ತಲುಪಿದೆ.

ಗುಲಾಬಿ  ರಪ್ತು: 2024 ರಲ್ಲಿ 10.8 ದಶಲಕ್ಷ ಗುಲಾಬಿಗಳನ್ನು ಸಾಗಣೆ ಮಾಡಿದ್ದು, 2023 ಕ್ಕೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆ ಕಂಡಿದೆ. ಅದೇ ರೀತಿ, 822 ಮೆಟ್ರಿಕ್ ಟನ್‌ಮಾವಿನ ಹಣ್ಣು ಬೆಂಗಳೂರು ವಿಮಾನ ನಿಲ್ದಾಣದಿಂದ ರಫ್ತಾಗಿದ್ದು, 2023 ಕ್ಕೆ ಹೋಲಿಸಿದರೆ ಶೇ.20 ಹೆಚ್ಚಳವನ್ನು ಕಂಡಿದೆ. ಇನ್ನು, ಕೊತ್ತಂಬರಿ ಸಾಗಣೆಯಲ್ಲೂ ಶೇ.53ಬೆಳವಣಿಗೆ ದಾಖಲಾಗಿದೆ. 2024 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಪ್ರಯಾಣಿಕರು ಹಾಗೂ ಸರಕು ಸಾಗಣೆಯಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ವಿಮಾನ ನಿಲ್ದಾಣವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಹೆಬ್ಬಾಗಿಲಾಗಿರುವುದನ್ನು ಸಾಬೀತು ಮಾಡಿದೆ. ವಿಸ್ತರಣೆ, ಕಾರ್ಯಾಚರಣೆಯ ಉತ್ಕೃಷ್ಟತೆ ಮತ್ತು ಪ್ರಯಾಣಿಕ-ಕೇಂದ್ರಿತ ಮನೋಭಾವದೊಂದಿಗೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಬೆಳವಣಿಗೆ ಕಾಣುವ ಭರವಸೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net